ಬೆಳಗಾವಿ: ಮರಾಠಿ ಸಂಘಟನೆಗಳ ಪರ ಕಾರ್ಯಕರ್ತರೆನ್ನಲಾದ ಪುಂಡರ ಗುಂಪು ಕನ್ನಡ ನಾಡು-ನುಡಿ ವಿರುದ್ಧದ ಕೀಟಲೆಯನ್ನು ಮುಂದುವರಿಸಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನೆ ಬೆಂಬಲಿಗರೆನ್ನಲಾದ ಯುವಕರ ಗುಂಪು ಕರ್ನಾಟಕ ಸಾರಿಗೆ ಸಂಸ್ಥೆಗಳ ಬಸ್’ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸಾರಿಗೆ ಬಸ್ ಮೇಲೆ ಕಪ್ಪು ಮಸಿ ಬಳಿದು ಪುಂಡಾಟ ಪ್ರದರ್ಶಿಸಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ಮಧ್ಯದ ಕೆಎಸ್ಸಾರ್ಟಿಸಿ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಕರ್ನಾಟಕದಿಂದ ಮಹಾರಾಷ್ಟ್ರ ನಡುವೆ 400ಕ್ಕೂ ಹೆಚ್ಚು ಬಸ್’ಗಳು ಪ್ರತಿನಿತ್ಯ ಸಂಚರಿಸುತ್ತಿವೆ. ಇದೀಗ ಮರಾಠ ಪರ ಕಾರ್ಯಕರ್ತರ ಈ ಪುಂಡಾಟದಿಂದಾಗಿ ಕನ್ನಡಿಗರಲ್ಲಿ ಆತಂಕ ಉಂಟಾಗಿದೆ. ಉಭಯ ರಾಜ್ಯಗಳ ನಡುವೆ ಸಾರಿಗೆ ಸಂಸ್ಥೆ ಬಸ್ ಸೇವೆ ಸ್ಥಗಿತಗೊಂಡಿದ್ದರಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ.