ನವದೆಹಲಿ: ಹೃದಯಾಘಾತದ ನಂತರ ಸ್ಟೆಮ್ ಸೆಲ್ ಚಿಕಿತ್ಸೆ ಪಡೆದ ರೋಗಿಗಳಲ್ಲಿ ಹೃದಯ ವೈಫಲ್ಯ ಸಂಭವಿಸುವ ಸಾಧ್ಯತೆ ಕಡಿಮೆ ಎಂದು ಹೊಸ ಅಧ್ಯಯನವೊಂದು ಸ್ಪಷ್ಟಪಡಿಸಿದೆ.
ಹೃದಯಾಘಾತದ ಸಮಯದಲ್ಲಿ ಹೃದಯ ಸ್ನಾಯುಗಳು ಹಾನಿಗೊಳಗಾದಾಗ ರಕ್ತ ಪಂಪ್ ಮಾಡುವ ಸಾಮರ್ಥ್ಯ ಕುಗ್ಗುತ್ತದೆ. ಇದರಿಂದ ಉಸಿರಾಟದ ತೊಂದರೆ, ಆಯಾಸ, ಕಾಲುಗಳಲ್ಲಿ ಊತ ಮತ್ತು ಅನಿಯಮಿತ ಹೃದಯ ಬಡಿತಗಳಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
BMJ ಪತ್ರಿಕೆಯಲ್ಲಿ ಪ್ರಕಟಿತ ಹೊಸ ಕ್ಲಿನಿಕಲ್ ಅಧ್ಯಯನದ ಪ್ರಕಾರ, ಹೃದಯಾಘಾತದ ಬಳಿಕ ಸ್ಟೆಮ್ ಸೆಲ್ ಚಿಕಿತ್ಸೆಯು ಹೃದಯ ವೈಫಲ್ಯ ತಡೆಗಟ್ಟುವಲ್ಲಿ ಹಾಗೂ ಭವಿಷ್ಯದ ಹೃದಯ ಸಂಬಂಧಿತ ಗಂಭೀರ ಘಟನೆಗಳ ಅಪಾಯವನ್ನು ಕಡಿಮೆ ಮಾಡುವಲ್ಲಿ ಸಹಕಾರಿ ಆಗಬಹುದು ಎಂದು ತೋರಿಸಿದೆ.
ಲಂಡನ್‌ನ ಕ್ವೀನ್ ಮೇರಿ ವಿಶ್ವವಿದ್ಯಾಲಯದ ಸಂಶೋಧಕರು ಸೇರಿದಂತೆ ಅಂತರರಾಷ್ಟ್ರೀಯ ತಜ್ಞರ ತಂಡವು ಈ ಅಧ್ಯಯನ ನಡೆಸಿದೆ. ಹೃದಯಾಘಾತದ ನಂತರ ನೇರವಾಗಿ ಹೃದಯದ ಧಮನಿಗಳಿಗೆ (ಇಂಟ್ರಾಕರೋನರಿ ಇನ್ಫ್ಯೂಷನ್) ಸ್ಟೆಮ್ ಸೆಲ್‌ಗಳನ್ನು ನೀಡುವ ವಿಧಾನವನ್ನು ಅವರು ಮೂರು ವರ್ಷಗಳ ಕಾಲ ಅಧ್ಯಯನ ಮಾಡಿದರು.
“ಹೃದಯ ಸ್ನಾಯುವಿನ ಸಾವಿನ ನಂತರ ಈ ತಂತ್ರವು ಪುನಶ್ಚೇತನಕ್ಕೆ ನೆರವಾಗುತ್ತಿದ್ದು, ಮುಂದಿನ ಹೃದಯಾಘಾತ ಅಥವಾ ವೈಫಲ್ಯದ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗಿದೆ,” ಎಂದು ಸಂಶೋಧನಾ ತಂಡ ತಿಳಿಸಿದೆ.
ಇರಾನ್‌ನ ಮೂರು ಬೋಧನಾ ಆಸ್ಪತ್ರೆಗಳಲ್ಲಿ ನಡೆದ ಈ ಪ್ರಯೋಗದಲ್ಲಿ 396 ಮಂದಿ ರೋಗಿಗಳು (ಸರಾಸರಿ ವಯಸ್ಸು 57–59 ವರ್ಷ) ಭಾಗವಹಿಸಿದ್ದರು. ಇವರಲ್ಲಿ 136 ಮಂದಿ ಹೃದಯಾಘಾತದ 3 ರಿಂದ 7 ದಿನಗಳ ಒಳಗೆ ಸ್ಟೆಮ್ ಸೆಲ್ ಚಿಕಿತ್ಸೆ ಪಡೆದರು, ಉಳಿದ 260 ಮಂದಿ ಕೇವಲ ಸಾಮಾನ್ಯ ಚಿಕಿತ್ಸೆಯನ್ನು ಪಡೆದರು.
ಅಧ್ಯಯನದ ಪ್ರಕಾರ, ಸ್ಟೆಮ್ ಸೆಲ್ ಚಿಕಿತ್ಸೆ ಪಡೆದವರಲ್ಲಿ ಹೃದಯ ವೈಫಲ್ಯ ಪ್ರಮಾಣವು ಪ್ರತಿ 100 ವ್ಯಕ್ತಿ-ವರ್ಷಗಳಿಗೆ 2.77 ಆಗಿದ್ದರೆ, ಸಾಮಾನ್ಯ ಚಿಕಿತ್ಸೆ ಪಡೆದವರಲ್ಲಿ ಅದು 6.48 ಆಗಿತ್ತು. ಹೃದಯ ವೈಫಲ್ಯದಿಂದ ಆಸ್ಪತ್ರೆಗೆ ಮರು ದಾಖಲಾಗುವ ಪ್ರಮಾಣವೂ ಹೋಲಿಕೆಯಾಗಿ ಕಡಿಮೆ ಇತ್ತು. ಆರು ತಿಂಗಳ ಬಳಿಕ ಹೃದಯದ ಕಾರ್ಯಕ್ಷಮತೆ ಗಮನಾರ್ಹವಾಗಿ ಸುಧಾರಿಸಿದ್ದು ಕಂಡುಬಂದರೂ, ಸಂಶೋಧಕರು ಇನ್ನಷ್ಟು ವ್ಯಾಪಕ ಪ್ರಯೋಗಗಳು ಅಗತ್ಯವಿದೆ ಎಂದು ಸೂಚಿಸಿದ್ದಾರೆ.
 
	    	



















































