ಮಂಗಳೂರು: ರಾಜ್ಯ ಬಿಜೆಪಿಗೆ ಶಕ್ತಿಯಂತಿರುವ ‘ಬಿಲ್ಲವ’ ಸಮುದಾಯ ಇದೀಗ ಕಮಲ ಪಾಳಯದ ಮುಖಂಡರ ವಿರುದ್ಧವೇ ಸಿಡಿದೆದ್ದಿದೆ. ಗಣರಾಜ್ಯೋತ್ಸವ ಪರೇಡ್ ಸಂಧರ್ಭದಲ್ಲಿ ಕೇರಳ ಕಳಿಸಿದ್ದ ‘ಬ್ರಹ್ಮಶ್ರೀ ನಾರಾಯಣ ಗುರು’ ಸ್ಥಬ್ಧಚಿತ್ರವನ್ನು ಕೇಂದ್ರ ಸರಕಾರ ತಿರಸ್ಕರಿಸಿರುವ ವಿಚಾರ ಇದೀಗ ಕರ್ನಾಟಕ ಕರಾವಳಿಯಲ್ಲಿ ಪ್ರತಿಧ್ವನಿಸಿದೆ. ಸ್ಥಳೀಯ ನಾಯಕರ ಪಾತ್ರ ಏನು ಎಂಬ ಪ್ರಶ್ನೆ ಕೇಳಿಬಂದಿದೆ. ಶ್ರೀ ನಾರಾಯಣ ಗುರುಗಳನ್ನು ಆರಾಧ್ಯ ದೈವ ಎಂದೇ ಪೂಜಿಸುತ್ತಿರುವ ಬಿಲ್ಲವ, ಈಡಿಗ ಸಹಿತ ವಿವಿಧ ಸಮುದಾಯಗಳು ಬಿಜೆಪಿ ವಿರುದ್ಧ ರಣಕಹಳೆ ಮೊಳಗಿಸಿದ್ದು ಈ ಪರಿಸ್ಥಿತಿ ಇದೀಗ ಕಮಲ ಪಾಳಯಕ್ಕೆ ಸವಾಲಾಗಿ ಪರಿಣಮಿಸಿದೆ.
ದೇಶದ ಶಕ್ತಿ ಅನಾವರಣದ ಸನ್ನಿವಶ ಸೃಷ್ಟಿಸುವ ಗಣರಾಜ್ಯೋತ್ಸವ ಪೆರೇಡ್‌ಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರದ ಆಕರ್ಷಣೆ ತುಂಬುವ ಪ್ರಸ್ತಾಪವನ್ನು ಕೇರಳ ಸರ್ಕಾರ ಮುಂದಿಟ್ಟಿತ್ತು. ಆದರೆ ಈ ಆಗ್ರಹವನ್ನು ತಿರಸ್ಕರಿಸಿರುವ ಕೇಂದ್ರ ಸರ್ಕಾರವು, ಬದಲಾಗಿ ಆದಿಶಂಕರಾಚಾರ್ಯರ ಪ್ರತಿಕೃತಿಯನ್ನು ಇಡಬೇಕೆಂದು ಸೂಚಿಸಿದೆ ಎನ್ನಲಾಗಿದೆ.
ಈ ವಿಚಾರ ಹಿಂದುಳಿದ ಸಮುದಾಯವೆಂದೇ ಗುರುತಾಗಿರುವ ಬಿಲ್ಲವ ಸಮುದಾಯವನ್ನು ಕೆರಳುವಂತೆ ಮಾಡಿದೆ. ಅದರಲ್ಲೂ ಬಿಜೆಪಿಗೆ ಶಕ್ತಿ ಎಂಬಂತೆ ಗುರುತಾಗಿರುವ ಕರ್ನಾಟಕ ಕರಾವಳಿಯಲ್ಲಿ ಬಿಲ್ಲವ ಸಮುದಾಯದವರ ಆಕ್ರೋಶ ಸ್ಫೋಟಗೊಂಡಿದೆ. ಈ ಕುರಿತಂತೆ ಕರಾವಳಿಯ ಬಿಲ್ಲವ ಮುಖಂಡ, ಕುದ್ರೋಳಿ ಗೋಕರ್ಣನಾಥ ದೇವಾಲಯದ ಕೋಶಾಧಿಕಾರಿ ಆರ್.ಪದ್ಮರಾಜ್ ನೀಡಿರುವ ಹೇಳಿಕೆ ಆ ಸಮುದಾಯದಲ್ಲಿ ಹೋರಾಟದ ಕಿಚ್ಚು ಹಚ್ಚಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಇವರ ಪೋಸ್ಟ್‌ಗೆ ಸಾರ್ವಜನಿಕರಿಂದ ಬಗೆಬಗೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಿಜೆಪಿಗೆ ಪರ್ಯಾಯ ಶಕ್ತಿ ಹುಡುಕುವ ಅನಿವಾರ್ಯತೆ ಎದುರಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಪದ್ಮರಾಜ್ ರಾಮಯ್ಯ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರದಲ್ಲಿ ತಮ್ಮದೇ ಆದ ರೀತಿಯಲ್ಲಿ ಬಣ್ಣಿಸಿ ಸಮಾಜದ ಗಮನಸೆಳೆದರಿದ್ದಾರೆ. “ಭಾರತದ ಮಹಾನ್ ಸಂತರನ್ನು ಕೂಡ ಜಾತೀಯ ತಾರತಮ್ಯದಿಂದ ನೋಡಿದಂತಾಗುತ್ತದೆ, ಹಾಗೂ ಭಾರತೀಯ ಸನಾತನ ಪರಂಪರೆಗೆ ನಾವು ಅಗೌರವ ಮಾಡಿದಂತಾಗುತ್ತದೆ. ಮೇಲು ಕೀಳು, ಸ್ಪರ್ಶ ಅಸ್ಪರ್ಶ ಎನ್ನುವ ಜಾತಿ ಭೇಧ ಹಾಗೂ ಮತ ದ್ವೇಷ ತುಂಬಿದ ಸಾಮಾಜಿಕ ವ್ಯವಸ್ಥೆಯಲ್ಲಿ ಹಿಂದೂ ಧರ್ಮದ ಮೂಲ ತತ್ವಗಳಾದ ಉಪನಿಷತ್ತುಗಳು ಹೇಳಿದ ಸಮಾನತೆಯ ನೈಜ ಹಿಂದೂ ಧರ್ಮದ ಜ್ಞಾನದ ಬೆಳಕಾಗಿದ್ದಾರೆ ಬ್ರಹ್ಮಶ್ರೀ ನಾರಾಯಣ ಗುರುಗಳು. ಒಂದೇ ಜಾತಿ ಒಂದೇಧರ್ಮ ಒಂದೇ ದೇವರು ಎನ್ನುವ ತತ್ವವನ್ನು ಜಗಕ್ಕೆ ಸಾರಿದ ಪರಮ ಗುರುಗಳು. ಶಂಕರಾಚಾರ್ಯರು ಭೋದಿಸಿದ ಅದ್ವೈತ ವನ್ನು ಸಮಾಜದಲ್ಲಿ ಪ್ರಾಯೋಗಿಕವಾಗಿ ಮಾಡಿ ತೋರಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಈ ಮಹಾನ್ ಆತ್ಮಜ್ಞಾನಿಗಳ ನಡುವೆ ಅವರು ಹುಟ್ಟಿದ ಕಾರಣದಿಂದ ಭೇಧಮಾಡುವುದು ಖಂಡಿತ ಸರಿಯಲ್ಲ. ಕೋಟ್ಯಾಂತರ ಗುರುದೇವರ ಅನುಯಾಯಿಗಳ ಭಕ್ತಿ ಮತ್ತು ಭಾವನೆಗಳಿಗೆ ಸರ್ಕಾರ ಅಗೌರವ ತೋರಿಸಿರುವುದು ವಿಷಾದನೀಯ. ಇದನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ. ಕೇಂದ್ರ ಸರಕಾರವು ಈ ಬಗ್ಗೆ ಪುನರ್ಪರಿಶೀಲನೆ ಮಾಡಿ ಗುರುದೇವರ ಪ್ರತಿಮೆ ಗಣರಾಜ್ಯೋತ್ಸವ ಪರೇಡ್ ನಲ್ಲಿ ಇರುವಂತೆ ಸೂಕ್ತ ಕ್ರಮಕೈಗೊಳ್ಳ ಬೇಕೆಂದು ಒತ್ತಾಯಿಸುತ್ತೇನೆ’ ಎಂದು ಪದ್ಮರಾಜ್ ಅವರು ಪೋಸ್ಟ್ ಹಾಕಿದ್ದಾರೆ.
ಇದಕ್ಕೆ ಕಮೆಂಟ್ ಮಾಡಿರುವ ಸಾರ್ವಜನಿಕರು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೇಂದ್ರದ ನಿರ್ಧಾರದಿಂದ ಸಮಾಜಕ್ಕೆ ಕೆಟ್ಟ ಸಂದೇಶ ಹೋಗಬಹುದು ಎಂದು ಕೆಲವರು ಹೇಳಿಕೊಂಡರೆ, ಕೆಲವರು ‘ಅವರು ತಿರಸ್ಕರಿಸಲಿ ನಾವು ಪ್ರತಿ ಮನೆ ಮನೆಗೂ ತಲುಪಿಸೋಣ‘ ಎಂದು ಬಿಜೆಪಿ ವಿರುದ್ಧ ಸಮರಕ್ಕೆ ಕರೆ ನೀಡಿದ್ದಾರೆ. ಕೇರಳ ಸರ್ಕಾರದ ನಿಲುವು ನಮ್ಮ ಸಮುದಾಯದ ಪರವಾಗಿದೆ. ಆದರೆ ಈ ವರೆಗೂ ಬಿಜೆಪಿಗೆ ಶಕ್ತಿಯಂತಿರುವ ನಮ್ಮ ಸಮುದಾಯಕ್ಕೆ ನಮ್ಮ ಸರ್ಕಾರದಿಂದಲೇ ಅನ್ಯಾಯವಾಗಿದೆ ಎಂಂದೂ ಗುಡುಗಿದ್ದಾರೆ.
ಕರಾವಳಿಯಲ್ಲಿ ಬಿಲ್ಲವರೇ ರಾಜಕೀಯ ಶಕ್ತಿ..!
ಇದೀಗ ಬಿಲ್ಲವ ಸಮುದಾಯವನ್ನು ಸಮಾಧಾನಪಡಿಸುವುದು ಬಿಜೆಪಿಗೆ ಅನಿವಾರ್ಯವಾಗಿದೆ. ದಕ್ಷಿಣಕನ್ನಡ, ಉಡುಪಿ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳು ಹಾಗೂ ಆ ವ್ಯಾಪ್ತಿಯಲ್ಲಿನ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಬಿಲ್ಲವರು ಹಾಗೂ ಈಡಿಗರೇ ಓಟ್ ಬ್ಯಾಂಕ್. ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಶಾಸಕರಾದ ಉಮಾನಾಥ ಕೋಟ್ಯಾನ್, ಭರತ್ ಶೆಟ್ಟಿ, ಸುನೀಲ್ ಕುಮಾರ್, ರಾಜೇಶ್ ನಾಯ್ಕ್, ಹರೀಶ್ ಪೂಂಜಾ ಸಹಿತ ಬಿಜೆಪಿಯ ಪ್ರಮುಖ ನಾಯಕರ ಆಯ್ಕೆಯ ಹಿಂದಿರುವ ಮತಶಕ್ತಿ ಬಿಲ್ಲವರೇ ಆಗಿದ್ದು ಇದೀಗ ಈ ಬೆಳವಣಿಗೆ ಕಮಲ ಪಕ್ಷದ ಪಾಲಿಗೆ ಸವಾಲು ಎಂಬಂತಾಗಿದೆ. ಈ ನಡುವೆ, ಬಿಜೆಪಿ ನಾಯಕರ ವಿರುದ್ದದ ರಣಕಹಳೆಯು ಕರಾವಳಿ ದಸರಾದ ಕೇಂದ್ರಸ್ಥಾನ ಕುದ್ರೋಳಿ ದೇವಾಲಯದಿಂದಲೇ ಮೊಳಗಿರುವುದು ಅಚ್ಚರಿಯ ಸಂಗತಿ.
ಇತಿಹಾಸ ಪ್ರಸಿದ್ಧ ಕುದ್ರೋಳಿ ದೇಗುಲದ ಪ್ರಮುಖರಲ್ಲೊಬ್ಬರಾದ ಪದ್ಮರಾಜ್ ರಾಮಯ್ಯ ಅವರ ಅಭಿಪ್ರಯಕ್ಕೆ ಧ್ವನಿಗೂಡಿಸಿರುವ ಬಿಲ್ಲವ ಸಮುದಾಯದ ಪ್ರಮುಖರು, ‘ನಮ್ಮ ಸಮುದಾಯದವರೇ ಅಧಿಕಾರದಲ್ಲಿರುತ್ತಿದ್ದರೆ ಈ ರೀತಿಯ ಅನ್ಯಾಯವಾಗುತ್ತಿರಲಿಲ್ಲ’ ಎಂದು ಪ್ರತಿಪಾದಿಸಿದ್ದಾರೆ. ಈ ಮೂಲಕ ಮುಂಬರುವ ದಿನಗಳಲ್ಲಿ ತಮ್ಮ ಸಮುದಾಯಕ್ಕೆ ಆದ್ಯತೆ ನೀಡಬೇಕಿದೆ ಎಂಬ ಸಂದೇಶವನ್ನೂ ಸಮುದಾಯದ ಪ್ರಮುಖರು ರಾಜಕೀಯ ಪಕ್ಷಗಳ ಮುಂದಿಟ್ಟಿರುವುದು ಅಚ್ಚರಿಯ ಬೆಳವಣಿಗೆ.