ಕೈ ಪ್ರತಿಭಟನೆ ನಂತರದ ಬೆಳವಣಿಗೆ.. ಒಂದೆಡೆ ಶಾಸಕಿ ಸೌಮ್ಯ; ಇನ್ನೊಂದೆಡೆ ಖಾಕಿ ಗರಂ.. ಆದರೆ ಕಿಸಾನ್ ಕಾಂಗ್ರೆಸ್‌ನ ಪ್ರತಿದೂರಿನ ಬಗ್ಗೆ ಪೊಲೀಸ್ ಕಮೀಷನರ್ ತೀರ್ಮಾನವೇ ಮುಂದಿನ ಕುತೂಹಲ..
ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಕೆಲ ದಿನಗಳ ಹಿಂದೆ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ರಾಜಭವನ ಚಲೋ ಹೋರಾಟದ ನಂತರ ಇದೀಗ ಸರ್ಕಾರ ಹಾಗೂ ಕಾಂಗ್ರೆಸ್ ನಡುವೆ ಜಟಾಪಟಿ ತೀವ್ರಗೊಂಡಿದೆ.
ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರೊಂದಿಗೆ ಶಾಸಕಿ ಸೌಮ್ಯಾ ರೆಡ್ಡಿಯವರು ಜಟಾಪಟಿಗಿಳಿದ್ದಾರೆಂಬ ಘಟನೆ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಲು ಕ್ರಮ ವಹಿಸಿದ್ದಾರೆ. ಇದೀಗ ಈ ಪ್ರಸಂಗ ಪೊಲೀಸರಿಗೆ ತಿರುಗುಬಾಣವಾಗುತ್ತಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಅಂದು ನಡೆದ ಪ್ರತಿಭಟನೆ ವೇಳೆ ಪೊಲೀಸರು ಶಾಸಕಿ ಸೌಮ್ಯಾ ರೆಡ್ಡಿ ಮೇಲೆಯೇ ಹಲ್ಲೆ ಮಾಡಿದ್ದಾರೆಂದು ಕಿಸಾನ್ ಕಾಂಗ್ರೆಸ್ ಆರೋಪಿಸಿದೆ. ಈ ಕುರಿತಂತೆ ಕಿಸಾನ್ ಕಾಂಗ್ರೆಸ್ ಮುಖಂಡರು ಪೊಲೀಸ್ ಆಯುಕ್ತರ ಕಚೇರಿಯ ಕದ ತಟ್ಟಿದ್ದಾರೆ. ಪ್ರದೇಶ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮಿಗಾ ಅವರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರೊಂದನ್ನು ಸಲ್ಲಿಸಿ ಈ ವಿದ್ಯಮಾನಕ್ಕೆ ರೋಚಕತೆ ತುಂಬಿದ್ದಾರೆ.
ಸಚಿನ್ ಮಿಗಾ ದೂರಿನಲ್ಲೇನಿದೆ?
ಕಾಂಗ್ರೆಸ್ ಪಕ್ಷವು ಬೆಂಗಳೂರಿನಲ್ಲಿ ಏರ್ಪಡಿಸಿದ್ದ ರೈತರ ಪ್ರತಿಭಟನೆ ಸಂಧರ್ಭದಲ್ಲಿ ಹಲವು ಪೊಲೀಸ್ ಸಿಬ್ಬಂದಿ ಯಾವುದೇ ಮುನ್ನೆಚ್ಚರಿಕೆ ನೀಡದೇ ಏಕಾಏಕಿ ಶಾಸಕಿ ಸೌಮ್ಯರೆಡ್ಡಿ ಅವರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಪ್ರಜಾಪ್ರಭುತ್ವದ ತಳಹದಿಯ ಮೇಲೆ ಸಂವಿಧನಾತ್ಮಕವಾಗಿ ಪ್ರತಿಭಟನೆ ನಡೆಸುತ್ತಿದ್ದ ಶಾಸಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಈ ದೂರಿನಲ್ಲಿ ಸಚಿನ್ ಮಿಗಾ ಆರೋಪಿಸಿದ್ದಾರೆ.
ಒಬ್ಬ ಮಹಿಳೆಯ ತಲೆ ಕೂದಲು ಹಿಡಿದು ನಿಯಂತ್ರಿಸಲು ಅವಕಾಶವಿದೆಯೇ ಹೊರತು ಮಹಿಳೆಯ ಯಾವುದೇ ಅಂಗಾಗಳನ್ನು ಎಳೆದಾಡಲು ಅವಕಾಶವಿಲ್ಲ. ಈ ಮೂಲಕ ಪ್ರಜಾಪ್ರಭುತ್ವದ ದಮನವನ್ನು ಸಹಿಸಲು ಸಾಧ್ಯವಿಲ್ಲ. ಹಾಗಾಗಿ ಒಬ್ಬ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿರುವ ಪೊಲೀಸ್ ಸಿಬ್ಬಂದಿ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸಚಿನ್ ಮಿಗಾ ಆಗ್ರಹಿಸಿದ್ದಾರೆ.