ಬೆಂಗಳೂರು: ರಾಜ್ಯದ ಬಿಜೆಪಿ ಸರ್ಕಾರದ ಕಾರ್ಮಿಕ ಸಚಿವರಾಗಿರುವ ಶಿವರಾಂ ಹೆಬ್ಬಾರ ಮಾಲಿಕತ್ವದ ಕಾರ್ಖಾನೆಯಲ್ಲೇ ಕೆಲಸ ಮಾಡುವ ಕಾರ್ಮಿಕರಿಗೆ ಜೀವ ರಕ್ಷಣೆ ಇಲ್ಲ ಎನ್ನುವುದಾದರೆ ಲಕ್ಷಾಂತರ ಕಾರ್ಮಿಕರಿಗೆ ಸುರಕ್ಷತೆ ನೀಡಲು ಎಲ್ಲಿಂದ ಸಾಧ್ಯ? ಒಬ್ಬ ಯುವ ಕಾರ್ಮಿಕನ ಸಾವಿನ ಕಾರಣವಾಗಿರುವ ಸಚಿವ ಶಿವರಾಂ ಹೆಬ್ಬಾರ್ ನೈತಿಕತೆ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವ ಜನ ಫೆಡರೇಶನ್ (ಡಿವೈಎಫ್ಐ) ರಾಜ್ಯ ಸಮಿತಿ ಆಗ್ರಹಿಸಿವೆ.
ಕಾರ್ಮಿಕ ಸಚಿವರ ಮಾಲಿಕತ್ವದಲ್ಲಿ ಜೀವಕಳೆದುಕೊಂಡ ಅಮಾಯಕ ಬಡ ಯುವಕನ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕು ಮತ್ತು ಈ ಸಾವಿಗೆ ಕಾರಣವಾಗಿರುವ ಸಚಿವರ ಮಗ ವಿವೇಕ್ ಹೆಬ್ಬಾರ್ ಸೇರಿ ಇತರರ ಮೇಲೆ ಕೊಲೆ ಮೊಕದ್ದಮೆ ಹೊಡಿ ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ಹಾವೇರಿಯಲ್ಲೇ ತೀವ್ರ ಹೋರಾಟ ರೂಪಿಸಲಾಗುವುದು ಎಂದು ಸಿಐಟಿಯು ಹಾಗೂ ಡಿವೈಎಫ್‌ಐ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕೋಣನಕೇರಿಯಲ್ಲಿರುವ ಕಾರ್ಮಿಕ ಸಚಿವರ ಮಗನ ವಿವೇಕ್ ಹೆಬ್ಬಾರ್ ಮಾಲೀಕತ್ವದ ವಿಐಪಿಎನ್ ಡಿಸ್ಟಲರೀಸ್ ಕಾರ್ಖಾನೆಯಲ್ಲಿ
ತಾಲೂಕಿನ ದುಂಡಸಿ ಗ್ರಾಮದ ನವೀನ ಬಸಪ್ಪ ಚಲವಾದಿ (19) ಎಂಬ ಕಾರ್ಮಿಕ
ಯಂತ್ರದ ಬೆಲ್ಸ್‌ಗೆ ಸಿಲುಕಿ ಮೃತಪಟ್ಟ ಘಟನೆ ಶನಿವಾರ ಸಂಜೆ ಸಂಭವಿಸಿದೆ. ಕಾರ್ಖಾನೆಯಲ್ಲಿ ಕಬ್ಬಿನ ಪುಡಿಯನ್ನು ಯಂತ್ರಕ್ಕೆ ಹಾಕುತ್ತಿದ್ದ ಸಮಯದಲ್ಲಿ ಯಂತ್ರದ ಬೆಲ್ಟ್ಗೆ ಸಿಲುಕಿ ನವೀನನ ಎರಡೂ ಕೈಗಳು ಕಟ್ ಆಗಿ, ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ರೀತಿಯಕೆಲಸ ಮಾಡುವ ಸ್ಥಳದಲ್ಲಿ ಕಾರ್ಮಿಕರಿಗೆ ಯಾವುದೇ ಸುರಕ್ಷಾತಾ ಕ್ರಮ ಕೈಗೊಳ್ಳದಿರುವುದು ಘಟನೆಗೆ ಕಾರಣ ಎಂದು ಎಂದು ಹೇಳಲಾಗಿದೆ.ಲಕ್ಷಾಂತರ ಕಾರ್ಮಿಕರಿಗೆ ಸುರಕ್ಷತೆ ಒದಗಿಸಬೇಕಾದ ಕಾರ್ಮಿಕ ಸಚಿವರ ಕುಟುಂಬೇ ಮಾಲಿಕತ್ವ ಹೊಂದಿರುವ ಈ ಕಾರ್ಖಾನೆಯಲ್ಲಿ ಎಲ್ಲ ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಿರುವುದು ಅತ್ಯಂತ ಸ್ಷಷ್ಡವಾಗಿದೆ.ಕೆಲಸದ ಸ್ಥಳಗಳಲ್ಲಿ ಸುರಕ್ಷತೆಗಳೇ ಮಾಯವಾಗುತ್ತಿರುವಾಗ ಮತ್ತಷ್ಟು ಕಾರ್ಮಿಕರನ್ನು ಶೋಷಿಸಲು ಕಾರ್ಖಾನೆ ಕಾಯ್ದೆಗೆ ತಿದ್ದುಪಡಿ ತಂದು ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆ ಹೆಚ್ಚಿಸಲು ಬಿಜೆಪಿ ಸರ್ಕಾರ ಮತ್ತು ಸ್ವತಃ ಕಾರ್ಮಿಕ ಸಚಿವರೇ ಒಪ್ಪಿಗೆ ನೀಡುವುದು ಅತ್ಯಂತ ಖಂಡನಾರ್ಹ ಎಂದು ಕಾರ್ಮಿಕ ಸಂಘಟನೆಗಳ ಮುಖಂಡರು ಹೇಳಿದ್ದಾರೆ. Distiler
ಬಿಜೆಪಿ ಸರ್ಕಾರದಲ್ಲಿ ಪ್ರಭಾವೀ ಸಚಿವರಾಗಿರುವ ಸಚಿವ ಹೆಬ್ಬಾರ್ ಅವರ ಮೇಲೆ ಕಟ್ಟಡ ಕಾರ್ಮಿಕ ಮಂಡಳಿಯ ಸಾವಿರಾರು ಕೋಟಿ ನಿಧಿಯನ್ನು ದುರುಪಯೋಗ ಮಾಡಿಕೊಂಡು ನೂರಾರು ಕೋಟಿ ಭ್ರಷ್ಟಾಚಾರ ನಡೆಸಿರುವ ಆರೋಪವಿದೆ. ನೂರಾರು ಸಾಮಾಗ್ರಿಗಳ ಖರೀದಿಗಳ ಮೂಲಕ ಕೋಟ್ಯಾಂತರ ಹಣ ಕಬಳಿಸಲು ಗಮನ ನೀಡಿರುವ ಕಾರ್ಮಿಕ ಸಚಿವ ಹಾಗೂ ಅವರ ಮಗ ವಿವೇಕ್ ಹಬ್ಬಾರ್ ತಮ್ಮದೇ ಮಾಲೀಕತ್ವದ ಕಾರ್ಖಾನೆಯಲ್ಲಿ ಬಡ ಹಾಗೂ ಯುವ ಕಾರ್ಮಿಕನ ಸಾವಿಗೆ ನೇರ ಕಾರಣವಾಗಿದ್ದಾರೆ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಹಾಗೂ ಡಿವೈಎಫ್‌ಐಪ್ರಧಾನ ಕಾರ್ಯದರ್ಶಿ ಬಸವರಾಜ್ ಪೂಜಾರ್ ದೂರಿದ್ದಾರೆ.
ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಈ ಮುಖಂಡರು, ಪ್ರಕರಣಕ್ಕೆ ಸಂಬಂಧಿಸಿ ಕಾರ್ಖಾನೆ ಮಾಲೀಕ ವಿವೇಕ್ ಹೆಬ್ಬಾರ್, ವ್ಯವಸ್ಥಾಪಕ ಮಂಜುನಾಥ, ಲೇಬರ್ ಸಪ್ಲಾಯರ್‌ಗಳಾದ ದಾವಣಗೆರೆಯ ಬಸವರಾಜ ಬಸಪ್ಪ, ವಿಶ್ವನಾಥ ಎ.ಎಸ್., ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಉಮೇಶ ನಿಂಗಪ್ಪ ಸುರವೇ ಹಾಗೂ ಸೇಫ್ಟಿ ಇಂಜಿನಿಯರ್ ಮುಂಡಗೋಡದ ಆಕಾಶ ಶಿವಾಜಿ ಧರ್ಮೋಜಿ ಸೇರಿ 6 ಜನರ ವಿರುದ್ಧ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಗಮಬಸೆಳೆದಿದ್ದಾರೆ. ಆದರೆ ಮೃತ ಕಾರ್ಮಿಕನ ಕುಟುಂಬಕ್ಕೆ ಕನಿಷ್ಟ 50 ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕು ಹಾಗೂ ಸಾವಿಗೆ ಕಾರಣರಾದ ವಿವೇಕ್ ಹೆಬ್ಬಾರ್ ಮತ್ತಿತರ ಮೇಲೆ ಐಪಿಸಿ 300 ಹಾಗೂ 304A ಮೊದಲಾದ ಕಠಿಣ ಪ್ರಕರಣಗಳನ್ನು ದಾಖಲಿಸಿ ಕೂಡಲೇ ಬಂಧಿಸಬೇಕು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಹಾಗೂಪ್ರಜಾಸತ್ತಾತ್ಮಕ ಯುವ ಜನ ಫೆಡರೇಶನ್ (ಡಿವೈಎಫ್ ಐ) ಸಂಘಟನೆಗಳು ಆಗ್ರಹಿಸಿವೆ ಎಂದವರು ತಿಳಿಸಿದ್ದಾರೆ.