ಬೆಂಗಳೂರು: ಜಾರಕಿಹೊಳಿ ಅವರು ಸಚಿವ ಸಂಪುಟದಿಂದ ನಿರ್ಗಮನವಾಗಲು ಕಾರಣವಾಯಿತೆನ್ನಲಾದ ವಿವಾದಿತ ಸಿಡಿ ವಿಚಾರ ಕುರಿತಂತೆ ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತರೂ ಆದ ಐಜಿಪಿ ಸೌಮೆಂದು ಮುಖರ್ಜಿ ಸಾರಥ್ಯದ ‘SIT’ಯು ತನಿಖೆಯನ್ನು ಬಿರುಸುಗೊಳಿಸಿದ್ದು ಸಿಡಿ ರಹಸ್ಯದ ಸೂತ್ರದಾರಿಗಳ ಪತ್ತೆ ಕಾರ್ಯವೂ ಚುರುಕಾಗಿದೆ. ಆದರೆ ಈ ಎಸ್‌ಐಟಿ ರಚನೆಯ ಸರ್ಕಾರದ ನಿರ್ಧಾರದ ಬಗ್ಗೆ ಹಲವಾರು ರೀತಿಯ ವಿಶ್ಲೇಷಣೆ ಕೇಳಿಬರುತ್ತಿದ್ದು, ಈ ವಿಶೇಷ ತನಿಖಾ ತಂಡ ರಚನೆ ಅಗತ್ಯವಿತ್ತೇ ಎಂಬ ಪ್ರಶ್ನೆಗಳೂ ಹಲವರಲ್ಲಿ ಮೂಡಿದೆ.
ಎಲ್ಲಾ ಪ್ರಶ್ನೆಗಳಿಗೆ ಈ SIT ಸಿಬ್ಬಂದಿ ತನ್ನ ಕೆಲಸದ ಮೂಲಕವೇ ಉತ್ತರ ನೀಡುವ ಪ್ರಕ್ರಿಯೆಗೆ ಮುನ್ನುಡಿ ಬರೆದಿದೆ.
ಸೌಮೆಂದು ಮುಖರ್ಜಿ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಾಚರಣೆಗಿಳಿದ ವಿಶೇಷ ತನಿಖಾ ತಂಡ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಸಿಡಿ ರಹಸ್ಯದ ಹಿಂದಿನ ಮಹತ್ವದ ಸಂಗತಿಗಳನ್ನು ಬಯಲಿಗೆಳೆದಿದೆ ಎನ್ನಲಾಗಿದೆ.
ಸರ್ಕಾರಕ್ಕೆ ಸೌಮೆಂದು ಮೇಲೆಯೇ ನಂಬಿಕೆ
ಯಾವುದೇ ವಿವಾದ ಉಂಟಾದ ಸಂದರ್ಭದಲ್ಲಿ ತನಿಖಾ ತಂಡ ರಚಸಿ, ಆ ಮೂಲಕ ಪ್ರಕರಣವನ್ನು ಹಳ್ಳ ಹಿಡಿಸಲಾಗುತ್ತದೆ ಎಂಬುದು ಹಲವರ ಅಭಿಪ್ರಾಯ. ಆದರೆ ಈ ಬಾರಿ ಗೃಹ ಸಚಿವರು ಪ್ರಕರಣದ ಬಗ್ಗೆ ವಿಶೇಷ ಕಳಕಳಿ ಹೊಂದಿದ್ದಷ್ಟೇ ಅಲ್ಲ, ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವ ಅಗತ್ಯವಿದೆ ಎಂಬುದನ್ನೂ ಮನಗಂಡಿದ್ದಾರೆ. ಅದಕ್ಕಾಗಿ ನಿಷ್ಟೂರ ನಡೆಯ ಅಧಿಕಾರಿಯನ್ನೇ ನೇಮಿಸಬೇಕೆಂಬ ಹಠಕ್ಕೆ ಬಿದ್ದಿದ್ದರು ಗೃಹ ಸಚಿವ ಬಸವರಾಜ ಬೊಮ್ಮಾಯಿ. ಹಾಗಾಗಿ ಅವರ ಕಣ್ಣಚಿನಲ್ಲಿ ಕಂಡಿದ್ದು ಐಜಿಪಿ ಸೌಮೆಂದು ಮುಖರ್ಜಿ ಹೆಸರು. ಹಾಗಾಗಿ ಸೌಮೆಂದು ನೇತೃತ್ವದಲ್ಲಿ ಅವರು ಎಸ್‌ಐಟಿ ರಚಿಸಿದ್ದಾರೆ.
ಸೌಮೆಂದು ಎಷ್ಟು ಸೂಕ್ತ?
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸೌಮೆಂದು ಹೆಸರಿನ ಅಬ್ಬರ ಅಷ್ಟೇನು ಇಲ್ಲ. ಆದರೆ ಆಡಳಿತಾತ್ಮಕ ನಡೆ ಹಾಗೂ ಶಿಸ್ತಿನ ಕ್ರಮಗಳ ಮೂಲಕ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದ್ದವರು ಸೌಮೆಂದು ಮುಖರ್ಜಿ. ಯಾವುದೇ ಪ್ರಕರಣವಿರಲಿ ಅದರ ಆಳ-ಅಗಲ ಬಗೆದು ನಿಷ್ಟೂರವಾಗಿಯೇ ತನಿಖೆ ಕೈಗೊಳ್ಳುವ ಅವರು ಕ್ಲೈಮ್ಯಾಕ್ಸ್ ಘಟ್ಟ ತಲುಪುವವರೆಗೂ ಗೌಪ್ಯ ಕಾಪಾಡುತ್ತಾರೆ. ಇದುವೇ ಅವರ ತನಿಖೆಯ ಯಶಸ್ಸಿನ ರಹಸ್ಯ.
ಒಂದು ವೇಳೆ ಪ್ರಕರಣದ ಹಾದಿಯ ನಡುವೆ, ತನ್ನ ಹೆಜ್ಜೆ ಗುರುತು ಪ್ರಭಾವಿಗಳಿಗೆ ಗೊತ್ತಾಗಿ ಎಲ್ಲಿ ಅವರು ಒತ್ತಡ ಹೇರುವರೋ ಎಂಬ ಖಾಕಿ ಸಂಶಯವೇ ಈ ಅಧಿಕಾರಿಯ ಈ ನಡೆಗೆ ಕಾರಣ ಎನ್ನುವುದು ಅವರ ಸಹೋದ್ಯೋಗಿಗಳ ಮಾತು.
ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯಾಗಿದ್ದಾಗ ಅಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ವಿನಯ್ ಗಾವಂಕರ್ ಜೊತೆ ಕಾರ್ಯಾಚರಣೆಗಿಳಿದು, ಮುತ್ತಪ್ಪ ರೈ ಸಹಚರರೆಂದು ಹೇಳಿಕೊಳ್ಳುತ್ತಿದ್ದವರ ವ್ಯೂಹಗಳನ್ನು ಬೇಧಿಸಿದ್ದೂ ಇವರೇ. ಸಾಲು ಸಾಲು ಕೃತ್ಯಗಳನ್ನು ನಡೆಸಿ ವಿದೇಶದಲ್ಲಿ ಅವಿತಿದ್ದ ಅಂತಾರಾಷ್ಟ್ರೀಯ ಭೂಗತ ಪಾತಕಿ ಬನ್ನಂಜ ರಾಜಾನನ್ನು ಬಂಧಿಸಿ ಭಾರತಕ್ಕೆ ಕರೆತರುವ ಪ್ರಕ್ರಿಯೆಯಲ್ಲಿನ ಮಾಸ್ಟರ್ ಮೈಂಡ್ ಕೂಡಾ ಇವರು. ಬೆಳಗಾವಿ ಕಮೀಷನರ್ ಆಗಿದ್ದಾಗ ಗಡಿನಾಡಿನ ಖದೀಮರ ಹೆಜ್ಜೆ ಜಾಡು ಬೆನ್ನತ್ತಿ ಪುಂಡರಿಗೆ ಅಂಕುಶ ಹಾಕಿದ್ದಾರಾದರೂ, ಇವರು ತಮ್ಮ ಬಹುಪಾಲು ಸೇವೆಯನ್ನು ನಾನ್ ಎಕ್ಸಿಕ್ಯುಟಿವ್ ವಲಯದಲ್ಲೇ ಕ್ರಮಿಸಿದ್ದಾರೆ. ಅದರಲ್ಲೂ ಸಿಐಡಿ ವಿಭಾಗ ಇವರಿಗೆ ಫೇವರೇಟ್. ಅಲ್ಲಿನ ಅನೇಕ ಕೇಸ್‌ಗಳ ಸಮರ್ಥ ತನಿಖೆಯ ಸಾಧನೆಯ ಕಾರಣದಿಂದಾಗಿಯೇ ಸೌಮೆಂದು ಅವರನ್ನು ಗೃಹಸಚಿವರು ಈ ಬಾರಿ ಎಸ್ಐಟಿಗೆ ಆಯ್ಕೆ ಮಾಡಿರುವುದು.
ಈ ನಡುವೆ, ಈ ತನಿಖೆಯ ಹೊಣೆಯು ತನ್ನ ಹೆಗಲೇರಿದ್ದೇ ತಡ, ಕಾರ್ಯಾಚರಣೆಗಿಳಿದಿರುವ ಸೌಮೆಂದು ಮುಖರ್ಜಿ, ಈ ಪ್ರಕರಣದ ಹಿಂದಿದ್ದ ಪಿತೂರಿಯು ಯಾವೆಲ್ಲಾ ಮಜಲುಗಳ ಮೂಲಕ ಸಾಗಿ ಬಂದಿವೆ ಎಂಬ ಸುಳಿವನ್ನು ಬೇಧಿಸಿ ಎಲ್ಲರ ಗಮನ ಕೇಂದ್ರೀಕರಿಸಿದ್ದಾರೆ.