ಬೆಂಗಳೂರು ಜನರಿಗೆ ನಾಗರಿಕತೆಯ ವೈಭವದ ನಡುವೆ, ಗ್ರಾಮೀಣ ಸೊಗಡಿನ ಸ್ಪರ್ಶ ನೀಡುವ ಪ್ರಯತ್ನಕ್ಕೆ ಯುವಕರ ತಂಡ ಮುಂದಾಗಿದೆ.
ಈಗಿನ ಪೀಳಿಗೆಯಲ್ಲಿ ನೈಸರ್ಗಿಕ ಪದಾರ್ಥಗಳು ಸಿಗುತ್ತವೆಯಾದರೂ ಆರೋಗ್ಯಪೂರ್ಣ ಆಹಾರ ಸಿಗುವುದು ಕಷ್ಟಸಾಧ್ಯ. ಇಂತಹಾ ಸನ್ನಿವೇಶದಲ್ಲಿ ‘ಶ್ರೀ’ ತಂಡದ ಪ್ರಯತ್ನ ಪ್ರಶಂಸಾರ್ಹ.
ಬೆಂಗಳೂರಿನಲ್ಲಿ ಮಿಲ್ಲೆಟ್ ಮಾಲ್‌ಗಳು ಹತ್ತಾರು ಇದ್ದರೂ ಹೊಟೇಲ್ ರೂಪದ ಮಳಿಗೆ ಇರಲಿಲ್ಲ. ಜನರಿಗೆ ಮಿಲೆಟ್ ಬಗ್ಗೆ ಅಭಿರುಚಿ ಮೂಡಿಸುವ ಪ್ರಯತ್ನ ಆಗಾಗ್ಗೆ ನಡೆದಿದ್ದರೂ ಅದರ ಬಳಕೆ ಹೇಗೆ ಎಂಬುದು ಬಹುತೇಕ ಮಂದಿಗೆ ತಿಳಿದಿಲ್ಲ. ಇಂತಹಾ ಸಂದರ್ಭದಲ್ಲಿ ‘ಶ್ರೀ’ ಹೆಸರಿನ ಯುವಕರು ಸಿರಿಧಾನ್ಯಗಳದ್ದೇ ಆದ ‘ಶ್ರೀ ಆರ್ಗಾನಿಕ್ ವರ್ಲ್ಡ್’ ಆರಂಭಿಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಸಮೀಪವೇ ಇರುವ ಈ ‘ಶ್ರೀ ಆರ್ಗಾನಿಕ್ ವರ್ಲ್ಡ್’ನಲ್ಲಿ ಇತರ ಹೊಟೇಲ್‌ಗಳಲ್ಲಿ ಸಿಗುವ ಎಲ್ಲಾ ರೀತಿಯ ತಿನಿಸುಗಳು ಲಭ್ಯವಿದೆ.
ಉಪ್ಪಿಟ್ಟು, ಮೀಲ್ಸ್, ಬಿಸಿಬೇಳೆ ಬಾತ್, ಪೊಂಗಲ್, ಇಡ್ಲಿ, ವಡ, ಪಲಾವ್, ಕೇಸರಿ ಬಾತ್, ವಿವಿಧ ಬಗೆಯ ದೋಸೆಗಳು ಸಹಿತ ಹಲವು ತಿಂಡಿಗಳು ಇಲ್ಲಿ ತಯಾರಾಗುತ್ತವೆ. ಆದರೆ ಈ ಯಾವುದೇ ತಿಂಡಿಯಲ್ಲಿ ಸಿರಿ ಧಾನ್ಯಗಳನ್ನು ಹೊರತುಪಡಿಸಿ ಇತರ ಯಾವುದೇ ಪರ್ಯಾಯ ದಾನ್ಯಗಳನ್ನು ಬಳಸುತ್ತಿಲ್ಲ ಎಂಬುದು ಗಮನಾರ್ಹ.
ಪರಿಪೂರ್ಣ ಸಿರಿಧಾನ್ಯಗಳಷ್ಟೇ ಅಲ್ಲ, ಯಾವುದೇ ರಿಫೈಂಡ್ ಎಣ್ಣೆ ಬಳಸದೆ, ತೆಂಗಿನೆಣ್ಣೆ, ಹಸುವಿನ ತುಪ್ಪಗಳಲ್ಲೇ ಇಲ್ಲಿ ತಿಂಡಿಗಳು ತಯಾರಾಗುತ್ತವೆ. ಯಾವುದೇ ರೀತಿ ಸಕ್ಕರೆ ಬಳಕೆ ಮಾಡಲ್ಲ. ಸೋಡಾ, ಮೈದ, ಗೋದಿ, ಪುಡ್ ಕಲರ್ ಬಳಸದೆ, ಆರ್ಗಾನಿಕ್ ಬೆಲ್ಲ, ತಾಟಿ ಬೆಲ್ಲ, ನೈಸರ್ಗಿಕ ಉಪ್ಪುಗಳನ್ನೇ ಬಳಸಲಗುತ್ತದೆಯಂತೆ. ತುಸು ದುಬಾರಿಯಾದರೂ ಈ ಖಾದ್ಯಗಳು ಆರೋಗ್ಯಪೂರ್ಣ.
ಕಾಯಿಲೆಗಳಿಗೆ ರಾಮಬಾಣ..!
ಅನ್ನ, ಎಣ್ಣೆಯಂತಹಾ ಪದಾರ್ಥಗಳ ಬಳಕೆ ಕಡಿಮೆ ಮಾಡುವಂತೆ ವೈದ್ಯರು ಸಲಹೆ ಮಾಡುತ್ತಾರೆ. ಅದರಲ್ಲೂ ಕೊಲೆಸ್ಟರಾಲ್, ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು ಇರುವಂತಹಾ ಮಂದಿಗೆ ಸಿರಿಧಾನ್ಯಗಳ ಆಹಾರ ಸೂಕ್ತ. ಈ ಉದ್ದೇಶದಿಂದಲೇ ‘ಶ್ರೀ’ ತಂಡದ ಯುವಕರ ಬಳಗ ಬೆಂಗಳೂರಿನ ಮಲ್ಲೇಶ್ವರಂನ 10ನೇ ಕ್ರಾಸ್ ಬಳಿ ‘ಸಿರಿ ಧಾನ್ಯಗಳ ಸವಿರುಚಿ’ ಹೆಸರಲ್ಲಿ ಹೊಟೇಲ್ ಆರಂಭಿಸಿದೆ.
ಈ ಹೊಟೇಲ್ ಆರಂಭವಾಗಿ ಕೆಲವೇ ದಿನಗಳಲ್ಲಿ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಖಾದ್ಯಗಳಷ್ಟೇ ಅಲ್ಲ, ಎಲ್ಲಾ ಬಗೆಯ ಸಿರಿಧಾನ್ಯಗಳು, ಸಾವಯವ ಎಣ್ಣೆ, ಬೆಲ್ಲ, ಉಪ್ಪು ಇತ್ಯಾದಿ ಉತ್ಪನ್ನಗಳೂ ಸಿಗುತ್ತವೆ.