ಚೆನ್ನೈ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸದಿದ್ದರೆ, ಇದು ವ್ಯಾಪಕ ಮತದಾರರ ಹೆಸರು ಅಳಿಸುವಿಕೆಗೆ ಕಾರಣವಾಗಬಹುದು ಎಂದು ಆರೋಪಿಸಿದ ತಮಿಳುನಾಡಿನ ಪ್ರಮುಖ ರಾಜಕೀಯ ಪಕ್ಷಗಳು, ಭಾರತೀಯ ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಜಂಟಿಯಾಗಿ ಮೊರೆ ಹೋಗುವ ನಿರ್ಧಾರಕ್ಕೆ ಬಂದಿವೆ.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಅಧ್ಯಕ್ಷತೆಯಲ್ಲಿ ಟಿ. ನಗರದಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಯಿತು. ಸುಮಾರು 40 ಕ್ಕೂ ಹೆಚ್ಚು ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಿದರು. ಸಭೆಯಲ್ಲಿ, ಸ್ಪಷ್ಟ ಮಾರ್ಗಸೂಚಿಗಳು ಮತ್ತು ಪರಿಶೀಲನೆಗೆ ಸೂಕ್ತ ಸಮಯ ದೊರೆಯುವವರೆಗೆ ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಲಾಯಿತು.
ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK), ಪಿಎಂಕೆ (PMK) ಹಾಗೂ ನಾಮ್ ತಮಿಳರ್ ಕಚ್ಚಿ (NTK) ಸೇರಿ 20 ಕ್ಕೂ ಹೆಚ್ಚು ಪಕ್ಷಗಳು ಸಭೆಯನ್ನು ಬಹಿಷ್ಕರಿಸಿದರೂ, ಒಟ್ಟಾರೆ 60 ಪಕ್ಷಗಳಿಗೆ ಆಹ್ವಾನ ಕಳುಹಿಸಲಾಗಿತ್ತು. ಪ್ರಜಾಪ್ರಭುತ್ವ ಮತ್ತು ಜನರ ಮತದಾನದ ಹಕ್ಕುಗಳನ್ನು ರಕ್ಷಿಸಲು ಈ ಸಭೆಯನ್ನು ಕರೆದಿದ್ದೇವೆ ಎಂದು ಸ್ಟಾಲಿನ್ ಹೇಳಿದರು.
ಅವರು ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆಯ ಉದಾಹರಣೆ ನೀಡುತ್ತಾ, ಅಲ್ಲಿ ಲಕ್ಷಾಂತರ ಮತದಾರರ ಹೆಸರುಗಳು ಅಳಿಸಲ್ಪಟ್ಟಿದ್ದು, ಅದರಲ್ಲಿ ಅಲ್ಪಸಂಖ್ಯಾತರು ಮತ್ತು ಅಂಚಿನಲ್ಲಿರುವ ಸಮುದಾಯಗಳೇ ಹೆಚ್ಚು ಪೀಡಿತರಾಗಿದ್ದಾರೆ ಎಂದು ಉಲ್ಲೇಖಿಸಿದರು.
“ಬಿಹಾರದಲ್ಲಿ ನಡೆದ ದೋಷಗಳು ತಮಿಳುನಾಡಿನಲ್ಲಿ ಪುನರಾವರ್ತನೆಯಾಗಬಾರದು. ಜನರ ಮತದಾನದ ಹಕ್ಕನ್ನು ಯಾವ ಸಂದರ್ಭದಲ್ಲೂ ಹಾಳು ಮಾಡಬಾರದು,” ಎಂದು ಸ್ಟಾಲಿನ್ ಸ್ಪಷ್ಟವಾಗಿ ಎಚ್ಚರಿಸಿದರು. ಮತದಾರರ ಪಟ್ಟಿಯ ನವೀಕರಣ ಪ್ರಜಾಪ್ರಭುತ್ವಕ್ಕೆ ಅಗತ್ಯವೆಂಬುದನ್ನು ಒಪ್ಪಿಕೊಂಡರೂ, ಅದರ ಸಮಯ ಮತ್ತು ವಿಧಾನವು ಪ್ರಶ್ನಾರ್ಹವಾಗಿದೆ ಎಂದು ಅವರು ಹೇಳಿದರು. “ಮತದಾನಕ್ಕೂ ಕೆಲವೇ ತಿಂಗಳುಗಳ ಮೊದಲು ಪೂರ್ಣ ಪ್ರಮಾಣದ ಪರಿಷ್ಕರಣೆ ನಡೆಸುವುದು, ಪಟ್ಟಿಯನ್ನು ಶುದ್ಧೀಕರಿಸುವ ನೆಪದಲ್ಲಿ ನಿಜವಾದ ಮತದಾರರ ಹೆಸರು ಅಳಿಸಲು ಉದ್ದೇಶಿತ ಕ್ರಮವಾಗಿರಬಹುದು,” ಎಂದು ಸ್ಟಾಲಿನ್ ಆರೋಪಿಸಿದರು.
ಸರ್ವಪಕ್ಷ ಸಭೆಯ ನಿರ್ಣಯ ಪ್ರಕಾರ, ಚುನಾವಣಾ ಆಯೋಗವು ತನ್ನ ಅಧಿಸೂಚನೆಯಲ್ಲಿನ ದೋಷಗಳನ್ನು ತಕ್ಷಣ ಸರಿಪಡಿಸಬೇಕು, ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಅನುಸರಣೆಯನ್ನು ಖಚಿತಪಡಿಸಬೇಕು ಮತ್ತು 2026ರ ವಿಧಾನಸಭಾ ಚುನಾವಣೆಯ ನಂತರ ಮಾತ್ರ ಪಾರದರ್ಶಕ ರೀತಿಯಲ್ಲಿ ಪರಿಷ್ಕರಣೆ ಕಾರ್ಯ ನಡೆಸಬೇಕು ಎಂದು ಒತ್ತಾಯಿಸಲಾಯಿತು.
ಪ್ರಸ್ತುತ ರೂಪದಲ್ಲಿರುವ SIR ಪ್ರಕ್ರಿಯೆಯು ಪ್ರಜಾಪ್ರಭುತ್ವದ ಮೂಲ ಪ್ರಕ್ರಿಯೆಗೂ ಬೆದರಿಕೆಯಾಗಿದೆ ಎಂದು ಸಭೆಯು ಎಚ್ಚರಿಸಿದೆ.
“ಆಯೋಗವು ನಮ್ಮ ಕಳವಳಗಳನ್ನು ಪರಿಗಣಿಸದೆ ಮುಂದುವರಿದರೆ, ನ್ಯಾಯಾಂಗ ಹಸ್ತಕ್ಷೇಪವನ್ನು ಕೋರುವ ಬೇರೇ ದಾರಿ ಉಳಿಯುವುದಿಲ್ಲ,” ಎಂದು ನಿರ್ಣಯದಲ್ಲಿ ಸ್ಪಷ್ಟಪಡಿಸಲಾಗಿದೆ.


















































