ಬೆಂಗಳೂರು: ಕೇವಲ ಭಾರತ ಮಾತ್ರವಲ್ಲ ವಿಶ್ವನಾಯಕರಾಗಿರುವ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿಯಾಗಿ ರಾವಣ ಎಂಬ ಶಬ್ದವನ್ನು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಗುಜರಾತ್‍ನಲ್ಲಿ ಬಳಸಿದ್ದಾರೆ. ಇದು ಕಾಂಗ್ರೆಸ್ ಸಂಸ್ಕøತಿಯನ್ನು ಅನಾವರಣಗೊಳಿಸಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸೈಲೆಂಟ್ ಸುನಿಲ್ ಅವರ ಕುರಿತು ನಮ್ಮ ರಾಜ್ಯಾಧ್ಯಕ್ಷರು ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಅವರನ್ನು ಪಕ್ಷಕ್ಕೆ ಸೇರಿಸುವುದಿಲ್ಲ ಎಂದಿದ್ದಾರೆ ಎಂದು ವಿವರಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್‍ನ ಅನೇಕ ನಾಯಕರು ಮತ್ತು ಶಾಸಕರು ಬಿಜೆಪಿ ಕಡೆ ಒಲವು ತೋರಿಸುವ ಮೂಲಕ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಅನೇಕ ಜನ ನಿಕಟ ಸಂಪರ್ಕದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಅದರ ಫಲಿತಾಂಶ ನಿಮ್ಮೆದುರು ಬರಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ತಮ್ಮ ಪಕ್ಷ ಸೇರುವ ಬಿಜೆಪಿ ಶಾಸಕನ ಕುರಿತು ವಿವರ ನೀಡಿದರೆ ನಾವು ಆ ಪಕ್ಷದಿಂದ ಬಿಜೆಪಿ ಸೇರುವವರ ವಿವರ ಕೊಡಲು ಸಿದ್ಧವಿದೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ಅನೇಕ ಮುಖಂಡರು ಮತ್ತು ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಅವರು ಪಕ್ಷ ಸೇರುವ ದಿನವನ್ನು ಕಾದುನೋಡಿ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಎಷ್ಟು ರೌಡಿಗಳು, ಗೂಂಡಾಗಳಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಅವರಿಂದ ಬುದ್ಧಿ ಹೇಳಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ. ಶಾಸಕರು ಸೇರಿ ಇತರರು ಏನಿದ್ದಾರೆ ಎಂಬುದು ನಮಗೆ ಗೊತ್ತಿದೆ ಎಂದು ಪ್ರಶ್ನೆಗೆ ಅವರು ಉತ್ತರಿಸಿದರು.
ಪ್ರಿಯಾಂಕ್ ಖರ್ಗೆಯವರು ಕ್ಷೇತ್ರದಲ್ಲಿಲ್ಲ ಎಂದು ಪೋಸ್ಟರ್ ಅಂಟಿಸಿದ ಕುರಿತು ಅವರು ಮೊದಲು ಉತ್ತರಿಸಲಿ. ಹಿಂದೂಗಳನ್ನು ಟೀಕಿಸುವುದು ಸಲೀಸು ಎಂದು ಅನೇಕರು ತಿಳಿದುಕೊಂಡಿದ್ದಾರೆ. ನಮಗೆ ಹಿಂದೂಗಳ ಮತ ಬೇಡ ಎಂದು ಕಾಂಗ್ರೆಸ್ ಪಕ್ಷದವರು ತಮ್ಮ ಪ್ರಣಾಳಿಕೆಯಲ್ಲಿ ತಿಳಿಸಲಿ ಎಂದು ಸವಾಲೆಸೆದರು.


















































