ಬೆಂಗಳೂರು: ರಾಜ್ಯ ರಾಜಕಾರಣದಲ್ಲೀಗ ‘ಉಲ್ಟಾ ಮಚ್ಚೆ’ಯ ಫಲಾಫಲಗಳ ಸ್ವಾರಸ್ಯಕರ ಚರ್ಚೆ ಗಮನಸೆಳೆದಿದೆ. ಸಿ.ಟಿ.ರವಿ ಹಾಗೂ ಸಿದ್ಧರಾಮಯ್ಯ ಅವರ ವಾಕ್ಛಾಟಿಯ ಪ್ರತಿಧ್ವನಿ ಎರಡೂ ಪಕ್ಷಗಳ ಕಾರ್ಯಕರ್ತರ ಹುಬ್ವೇರುವಂತೆ ಮಾಡಿದೆ.
ಏನಿದು ‘ಉಲ್ಟಾ ಮಚ್ಚೆ..’?
ರಾಜಕೀಯ ಎದುರಾಳಿಗಳ ಬಗ್ಗೆ ತರಾತುರಿಯ ಪ್ರತಿಕ್ರಿಯೆ ಸಿದ್ದರಾಮಯ್ಯ ಅವರನ್ನು ಪೇಚಿಗೆ ಸಿಲುಕಿಸಿದೆ. ಬಿಜೆಪಿಯ ಅಸ್ತಿತ್ವ, ಅಳಿವು-ಉಳಿವು ಬಗ್ಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಟೀಕೆಗೆ ಟ್ವೀಟಾಸ್ತ್ರ ಮೂಲಕ ಎದಿರೇಟು ನೀಡಿದ್ದ ಸಿ.ಟಿ.ರವಿ ಅವರು ‘ಉಲ್ಟಾ ಮಚ್ಚೆ’ ಬಗ್ಗೆ ಬೊಟ್ಟು ಮಾಡಿದ್ದರು. ಸಿದ್ದರಾಮಯ್ಯ ಅವರು ನುಡಿಯುವ ಭವಿಷ್ಯವೆಲ್ಲವೂ ಉಲ್ಟಾ ಆಗುತ್ತಿದೆ ಎಂದು ಹಲವು ಪ್ರಕರಣಗಳನ್ನು ಉದಾಹರಿಸಿ ಟೀಕೆಗೆ ಸ್ವಾರಸ್ಯಕರ ತಿರುವು ತಂದುಕೊಟ್ಟಿದ್ದರು.
ಇದಕ್ಕೆ ಟ್ವೀಟ್ ಮೂಲಕವೇ ಪ್ರತಿಕ್ರಿಯಿಸಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ‘ಶೀಘ್ರ ಸಂಪುಟ ಸಚಿವರಾಗಲಿ ಎಂದು ಹಾರೈಸುತ್ತೇನೆ. ನನ್ನ ನಾಲಿಗೆಯಲ್ಲಿ ಉಲ್ಟಾ ಮಚ್ಚೆ ಇದೆ ಎಂಬ ಸಿ.ಟಿ.ರವಿ ನಂಬಿಕೆ ನಿಜವಾಗಲಿ’ ಎಂದಿದ್ದರು. ಒಂದು ವೇಳೆ ತಮ್ಮ ನಾಲಿಗೆಯಲ್ಲಿ ಉಲ್ಟಾ ಮಚ್ಚೆ ಇದ್ದರೆ, ರವಿ ಅವರು ಸಚಿವರಾಗದಿರಲಿ ಎಂದು ಸಿದ್ದರಾಮಯ್ಯ ಅವರು ಶಪಿಸಿದರೇ ಎಂದು ಮಾಧ್ಯಮಗಳು ವಿಶ್ಲೇಷಿಸಿವೆ.
.@CTRavi_BJP ಶೀಘ್ರ ಸಂಪುಟ ಸಚಿವರಾಗಲಿ ಎಂದು ಹಾರೈಸುತ್ತೇನೆ.
ನನ್ನ ನಾಲಿಗೆಯಲ್ಲಿ ಉಲ್ಟಾ ಮಚ್ಚೆ ಇದೆ ಎಂಬ @CTRavi_BJP ನಂಬಿಕೆ ನಿಜವಾಗಲಿ. pic.twitter.com/zgwrBDI8Sm
— Siddaramaiah (@siddaramaiah) August 16, 2021
ಸಿದ್ದರಾಮಯ್ಯ ಅವರ ಟ್ವೀಟ್ ಬಗ್ಗೆ ತಮ್ಮದೇ ಶೈಲಿಯಲ್ಲಿ ಎದಿರೇಟು ನೀಡಿರುವ ಸಿ.ಟಿ.ರವಿ, ‘ಹೇಗೂ ನಿಮ್ಮ ನಾಲಿಗೆಯಲ್ಲಿ ಉಲ್ಟಾ ಮಚ್ಚೆ ಇದೆ ಅಂತ ಒಪ್ಪಿಕೊಂಡಿದ್ದೀರಿ. ಇನ್ನೂ ಹತ್ತು ವರ್ಷಗಳ ಕಾಲ ಬಿಜೆಪಿ ಸರ್ಕಾರವೇ ಇರುತ್ತೆ, ಅಪ್ಪನಾಣೆಗೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಅಂತ ಹೇಳಿ ಬಿಡಿ’ ಎಂದು ಸಲಹೆ ಮಾಡಿದ್ದಾರೆ.
ಮಾನ್ಯ @siddaramaiah ಅವರೇ,
ಹೇಗೂ ನಿಮ್ಮ ನಾಲಿಗೆಯಲ್ಲಿ ಉಲ್ಟಾ ಮಚ್ಚೆ ಇದೆ ಅಂತ ಒಪ್ಪಿಕೊಂಡಿದ್ದೀರಿ.
ಇನ್ನೂ ಹತ್ತು ವರ್ಷಗಳ ಕಾಲ ಬಿಜೆಪಿ ಸರ್ಕಾರವೇ ಇರುತ್ತೆ, ಅಪ್ಪನಾಣೆಗೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಅಂತ ಹೇಳಿ ಬಿಡಿ 😂 https://t.co/IOUN6MKbrI
— C T Ravi 🇮🇳 ಸಿ ಟಿ ರವಿ (Modi Ka Parivar) (@CTRavi_BJP) August 17, 2021
ಹಾಗೊಂದು ವೇಳೆ ಸಿ.ಟಿ.ರವಿ ಅವರ ಪಂಥಾಹ್ವಾನ ಸ್ವೀಕರಿಸಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದರೆ ಉಲ್ಟಾ ಮಚ್ಚೆಯ ಫಲದಿಂದಾಗಿ ಬಿಜೆಪಿ ಸರ್ಕಾರ ಪತನವಾಗುತ್ತೋ ಗೊತ್ತಿಲ್ಲ. ಕೈ ನಾಯಕರಿಂದಲೇ ಮುನಿಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚು. ರವಿ ಚಾಣಾಕ್ಷ ಟ್ವೀಟ್‌ಗೆ ಸಿದ್ದು ಗುದ್ದು ಹೇಗಿರುತ್ತದೆ ಎಂಬುದೇ ಕುತೂಹಲ.
ಹರಿದಾಡಿದ ‘ಉಲ್ಟಾ’ ಸಂಗತಿಗಳು..
ಬಿಜೆಪಿ ವಿರುದ್ಧ ನಿರಂತರ ಟೀಕೆ ಮಾಡುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ನಡೆ ಬಗ್ಗೆ ಆಕ್ರೋಶ ಹೊರ ಹಾಕಿರುವ ಸಿ.ಟಿ.ರವಿ, ‘ಸಿದ್ದರಾಮಯ್ಯ ಅವರು ಹೇಳಿದ್ದೆಲ್ಲವೂ ಉಲ್ಟಾ ಆಗುತ್ತೆ, ಅವರ ನಾಲಗೆಯಲ್ಲಿ ಉಲ್ಟಾ ಮಚ್ಚೆ ಇದೆ’ ಎಂದು ವ್ಯಂಗ್ಯವಾಡಿದ್ದಾರೆ. ‘ಸಿದ್ದರಾಮಯ್ಯ ಬಿಜೆಪಿ ಉಳಿಯಲ್ಲ’ ಅಂದಿದ್ದರು. ಆದರೆ ಈಗ ಮತ್ತೆ ಅಧಿಕಾರಕ್ಕೆ ಬಂದಿದೆ. ಈ ಅವಧಿ ಮುಗಿಸಿ ಮತ್ತೆ ಮುಂದಿನ 5 ವರ್ಷಕ್ಕೂ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಸಿದ್ದರಾಮಯ್ಯಗೆ ಸಿ.ಟಿ.ರವಿ ಟಾಂಗ್ ಕೊಟ್ಟಿದ್ದಾರೆ. ‘ಅಪ್ಪನಾಣೆ ಮೋದಿ ಪ್ರಧಾನಿ ಆಗಲ್ಲ’ ಅಂತಾ ಸಿದ್ದರಾಮಯ್ಯ ಹೇಳಿದ್ದರು. ಆದ್ರೆ ಮೋದಿ 2 ಸಲ ಪ್ರಧಾನಿಯಾದರು. ಸಿದ್ದರಾಮಯ್ಯ ಏನು ಹೇಳುತ್ತಾರೋ ಅದು ಉಲ್ಟಾ ಆಗುತ್ತೆ. ‘2018ರಲ್ಲಿ ನಾನು ಮತ್ತೆ ಅಧಿಕಾರಕ್ಕೆ ಬಂದೇ ಬರ್ತೀನಿ’ ಎಂದೂ ಹೇಳಿದ್ದರು. ಬಂದ್ರಾ..? ಎಂದೂ ಸಿ.ಟಿ ರವಿ ಪ್ರಶ್ನೆ ಮಾಡಿದ್ದಾರೆ.