ವಿಜಯಪುರ: ಮೈಸೂರು ದಸರಾ ಉದ್ಘಾಟಿಸಲು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಸರ್ಕಾರ ಆಹ್ವಾನಿಸಿರುವುದನ್ನು ಬಿಜೆಪಿ ನಾಯಕರು ಬಲವಾಗಿ ವಿರೋಧಿಸಿದ್ದಾರೆ. ಬಿಜೆಪಿ ನಾಯಕರ ಈ ನಡೆ ಬಗ್ಗೆ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಸರ್ಕಾರದ ನಿರ್ಧಾರವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡರು. ಬಾನು ಮುಷ್ತಾಕ್ ಅವರು ಕನ್ನಡದಲ್ಲಿ ಬರೆದ ಕೃತಿಯ ಅನುವಾದಕ್ಕೆ ಬುಕರ್ ಪ್ರಶಸ್ತಿ ಬಂದಿದೆ. ಹೀಗಾಗಿ ಸರ್ಕಾರ ಬಾನು ಮುಷ್ತಾಕ್ ಹಾಗೂ ಆ ಕೃತಿಯನ್ನು ಅನುವಾದಿಸಿದ ದೀಪಾ ಭಸ್ತಿಯವರಿಗೆ ಸನ್ಮಾನಿಸಿದೆ. ಹಾಗಾಗಿ ಬಾನು ಮುಷ್ತಾಕ್ ಕನ್ನಡ ಸಾಹಿತಿ ಆಗಿರುವುದರಿಂದ ದಸರಾ ಉದ್ಘಾಟಿಸಲಿದ್ದಾರೆಂದು ಸಿಎಂ ಹೇಳಿದರು.
ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸುವ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ನ್ಯಾಯಾಲಯದ ಮೆಟ್ಟಿಲೇರಿರುವ ಕುರಿತು ಪ್ರತಿಕ್ರಿಯಿಸಿದ ಐಎಂ, ಈ ಹಿಂದೆ ಕವಿ ನಿಸಾರ್ ಅಹಮ್ಮದ್ ದಸರಾ ಉದ್ಘಾಟನೆಗೆ ಬಂದಾಗ ಏಕೆ ಕೋರ್ಟ್ಗೆ ಹೋಗಲಿಲ್ಲ? ಹೈದರಾಲಿ ಟಿಪ್ಪು, ಮಿರ್ಜಾ ಇಸ್ಮಾಯಿಲ್ ಮೆರವಣಿಗೆ ಮಾಡಿದಾಗ ಏಕೆ ವಿರೋಧ ಮಾಡಲಿಲ್ಲ?’ ಎಂದು ಪ್ರಶ್ನಿಸಿದರು. ಬಿಜೆಪಿ ನಾಯಕರಿಗೆ ನ್ಯಾಯಾಲಯದಲ್ಲೂ ಉತ್ತರ ನೀಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.




























































