ವಿಶ್ವಶ್ರೇಷ್ಠ ಶ್ರೀ ಶಿವಕುಮಾರ ಶ್ರೀಗಳಿಗೆ ಸಲ್ಲುತ್ತಿರುವ ಗೌರವ.. ಶ್ರೀಗಳ ಹುಟ್ಟೂರಲ್ಲೇ ಅನನ್ಯ ಶ್ರದ್ಧಾ ಕೇಂದ್ರ.. 111 ಅಡಿ ಪುತ್ಥಳಿಯ ಆಕರ್ಷಣೆ.. ಶ್ರೀಗಳ ಜೀವನ ಚರಿತ್ರೆಯ ಮ್ಯೂಸಿಯಂ ನಿರ್ಮಾಣ.. ಜೀವನ ಚರಿತ್ರೆಯ ಕಿರುಚಿತ್ರ ವೀಕ್ಷಿಸಲು ಆಡಿಟೋರಿಯಂ.. ಸುಮಾರು 25 ಕೋ.ರೂಗಳ ಈ ಯೋಜನಾ ಕಾಮಗಾರಿಯನ್ನು ಕೆಆರ್‌ಐಡಿಎಲ್ ನಿಗಮ ಸೇವಾ ಶುಲ್ಕ ಪಡೆಯದೆ ನಡೆಸುತ್ತದೆ ಎಂಬುದು ಸಚಿವರ ಹೇಳಿಕೆ.
ಬೆಂಗಳೂರು: ನಡೆದಾಡುವ ದೇವರು ಎಂದೇ ಖ್ಯಾತರಾಗಿರುವ ದಿವಂಗತ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳ ಹೆಸರಲ್ಲಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ಸ್ಥಾಪನೆಯ ಕಾರ್ಯಕ್ಕೆ ರಾಜ್ಯ ಸರ್ಕಾರ ಮುನ್ನುಡಿ ಬರೆದಿದೆ.
ಶ್ರೀ ಶಿವಕುಮಾರ ಸ್ವಾಮಿಗಳ ಹುಟ್ಟೂರಾದ ಮಾಗಡಿ ತಾಲೂಕು ವೀರಾಪುರ ಗ್ರಾಮದಲ್ಲಿ ಸುಮಾರು 25 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ಸ್ಥಾಪನೆಯಾಗಲಿದೆ. ಶುಕ್ರವಾರ (18.06.2021) ನಡೆದ ಕಾರ್ಯಕ್ರಮದಲ್ಲಿ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರು ಈ ಯೋಜನಾ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಶ್ರೀ ಶಿವಕುಮಾರ ಸ್ವಾಮಿಗಳು ಸಿದ್ದಗಂಗಾ ಮಠದ ಪೀಠಾಧಿಪತಿಯಾಗಿ ಅನ್ನ ದಾಸೋಹ, ಅಕ್ಷರ ದಾಸೋಹ ಮೂಲಕ ವಿಶ್ವದಲ್ಲಿ ಖ್ಯಾತಿಯಾಗಿದ್ದರು. ನಡೆದಾಡುವ ದೇವರು ಎಂದೇ ಜನಜನಿತರಾಗಿದ್ದರು. ಲಿಂಗಾಯತ ಮಠವಾಗಿದ್ದರೂ ಸಿದ್ದಗಂಗಾ ಮಠ ಜಾತಿ, ಮತ, ಪಂಥವೆನ್ನದೆ ಇಡೀ ಮನುಕುಲಕ್ಕೆ ಅನ್ನ, ಅಕ್ಷರ ದಾಸೋಹದ ಕೈಂಕರ್ಯ ನಡೆಸುತ್ತಿದೆ. ಇದರ ಮೂಲ ವ್ಯಕ್ತಿ ಎನಿಸಿರುವ ಶಿವಕುಮಾರ ಸ್ವಾಮಿಗಳು ಶತಾಯುಷಿಯಾಗಿದ್ದರು. ತಮ್ಮ 111ನೇ ವಯಸ್ಸಿನಲ್ಲಿ, 2019ರ ಜನವರಿ 21ರಂದು ವಿಧಿವಶರಾಗಿದ್ದರು.
ಅವರ ಸಾಧನೆ ಹಾಗೂ ಕೊಡುಗೆಯನ್ನು ಮನಗಂಡು ಅವರ ಹುಟ್ಟೂರಾದ ರಾಮನಗರ ಜಿಲ್ಲೆ ಮಾಗಡಿ ಸಮೀಪದ ವೀರಾಪುರ ಎಂಬ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ನಿರ್ಮಿಸಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರು 25 ಕೋಟಿ ರೂಪಾಯಿಗಳನ್ನು ಬಜೆಟ್‌ನಲ್ಲಿ ಘೋಷಿಸಿದ್ದರು.
ಈ ಮಹತ್ವಾಕಾಂಕ್ಷಿ ಯೋಜನೆಯ ಕಾಮಗಾರಿಯನ್ನು ಕೆ.ಆರ್.ಐ.ಡಿ.ಎಲ್ (Karnataka Rural Infrastructure Development Limited) ನಿಗಮಕ್ಕೆ ವಹಿಸಲಾಗಿದೆ. ಈ ಯೋಜನೆಗೆ ಭೂಮಿಪೂಜೆ ನೆರವೇರಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಶಿವಕುಮಾರ ಸ್ವಾಮಿಗಳ ಹುಟ್ಟೂರು ವೀರಾಪುರದಲ್ಲಿ ನಿರ್ಮಾಣವಾಗುವ ಈ ಕೇಂದ್ರ ರಾಜ್ಯದ ಪಾಲಿಗೆ ಹೆಮ್ಮೆಯ ಯೋಜನೆಯಾಗಿದೆ ಎಂದು. ಈ ಯೋಜನೆ ಮೂಲಜ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹುಟ್ಟಿದ ಮನೆಯ ಜೀರ್ಣೋದ್ಧಾರವಾಗಲಿದ್ದು ಇದೊಂದು ಪುಣ್ಯದ ಕೆಲಸವಾಗಿದೆ ಎಂದರು.
ವೀರಾಪುರದಲ್ಲಿ ರಸ್ತೆ, ಶಾಲೆ ಹಾಗೂ ದೇವಸ್ಥಾವನ್ನು ಸಹ ಅಭಿವೃದ್ಧಿ ಪಡಿಸಲಾಗುವುದು. ಮನೆಯನ್ನು ಅಭಿವೃದ್ಧಿ ಪಡಿಸಿ ಶ್ರೀಗಳು ಉಪಯೋಗಿಸುತ್ತಿದ್ದ ವಸ್ತುಗಳನ್ನು ಇಡಲಾಗುವುದು ಎಂದರು. ವೀರಾಪುರ ಗ್ರಾಮದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ 111 ಅಡಿ ಪುತ್ಥಳಿ ನಿರ್ಮಾಣ, ಅಂತಾರಾಷ್ಟ್ರೀಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಪಾರ್ಕ್’ಗೆ ಸರ್ಕಾರ 25 ಕೋಟಿ ರೂಪಾಯಿ ಅನುದಾನ ನೀಡಿದ್ದು, ಕೆ.ಆರ್.ಐ.ಡಿ.ಎಲ್ ಸಂಸ್ಥೆಯು ಯಾವುದೇ ಸೇವಾ ಶುಲ್ಕ ಪಡೆಯದೆ ಪೂರ್ಣ ಹಣವನ್ನು ಕಾಮಗಾರಿಗೆ ವಿನಿಯೋಗಿಸಲಿದೆ ಎಂದರು.
111 ಅಡಿ ಪುತ್ಥಳಿ ಶಿವಗಂಗೆ ಹಾಗೂ ಸಿದ್ದಗಂಗೆ ನೋಡುವ ರೀತಿ ನಿರ್ಮಾಣ ಮಾಡಲಾಗುವುದು. ಪುತ್ಥಳಿಯ ಕೆಳಭಾಗದಲ್ಲಿ ಶ್ರೀಗಳ ಜೀವನ ಚರಿತ್ರೆಯ ಮ್ಯೂಸಿಯಂ ನಿರ್ಮಾಣ ಹಾಗೂ ಜೀವನ ಚರಿತ್ರೆಯ ಕಿರುಚಿತ್ರ ವೀಕ್ಷಿಸಲು ಆಡಿಟೋರಿಯಂ ಸಹ ನಿರ್ಮಿಸಲಾಗುವುದು. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರಿನಿಂದ ಸಿದ್ದಗಂಗೆ ಕರ್ಮಭೂಮಿಗೆ 22 ಕಿ.ಮೀ ಇದ್ದು,ಜನರು ಪಾದಯಾತ್ರೆ ಮಾಡುವಂತೆ ರಸ್ತೆ ಅಭಿವೃದ್ಧಿಯಾಗಬೇಕು. , ಅದಿರಂಗ, ಮಧ್ಯರಂಗ, ಅಂತ್ಯರಂಗ ದರ್ಶನ ಪಡೆದರೆ ಪುಣ್ಯ ಬರುತ್ತದೆ ಎಂಬ ನಂಬಿಕೆ ಇದೆ ಎಂದರು
ಅದೇ ರೀತಿ ಶ್ರೀಗಳ ಹುಟ್ಟೂರು ವೀರಾಪುರ , ಸಿದ್ದಗಂಗಾ ಹಾಗೂ ಶಿವಗಂಗಾ ಸ್ಥಳಗಳ ದರ್ಶನ ಪಡೆದರೆ ಪುಣ್ಯ ಸಿಗುತ್ತದೆ ಎಂದರು.
ಇದಕ್ಕೂ ಮುನ್ನ ಸಚಿವರು ಪುತ್ಥಳಿ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವ್ಯವಸ್ಥೆಯನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಗಿಡಗಳನ್ನು ನೆಟ್ಟಿ ನೀರೆರದು, ಅವುಗಳನ್ನು ಪೋಷಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆ.ಆರ್.ಐ.ಡಿ.ಎಲ್ ಅಧ್ಯಕ್ಷ ರುದ್ರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ, ರಾಮನಗರ ಉಪವಿಭಾಗಾಧಿಕಾರಿ ಮಂಜುನಾಥ್, ಮಾಗಡಿ ತಹಶೀಲ್ದಾರ್ ಶ್ರೀನಿವಾಸ್ ಪ್ರಸಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವಿನಯ್ ಕುಮಾರ್ ಉಪಸ್ಥಿತರಿದ್ದರು.