ಬೆಂಗಳೂರು: ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷಾ ಕೊಲೆ ಘಟನೆ ಕುರಿತಂತೆ ಸಚಿವ ಈಶ್ವರಪ್ಪ ನೀಡಿರುವ ಹೇಳಿಕೆ ಬಗ್ಗೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಕೆಶಿ ಹೇಳಿಕೆಯಿಂದ ಪ್ರೇರಣೆ ಪಡೆದು ಮುಸ್ಲಿಂ ಗೂಂಡಾಗಳು ಹಿಂದೂ ಕಾರ್ಯಕರ್ತನ ಕೊಲೆ ಮಾಡಿದ್ದಾರೆಂಬ ಈಶ್ವರಪ್ಪನವರ ಆರೋಪಕ್ಕೆ ತಿರುಗೇಟು ನೀಡಿರುವ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೆ.ಎಸ್. ಈಶ್ವರಪ್ಪನವರು ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ, ಇದು ಅಶಾಂತಿ ಸೃಷ್ಟಿಸುವ ಹೇಳಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ತನಿಖೆಯೇ ಆಗಿಲ್ಲ. ಆಗಲೇ ಜನರ ದಾರಿ ತಪ್ಪಿಸಲು ಹೇಳಿಕೆ ನೀಡುತ್ತಿದ್ದಾರೆ ಎಂದ ಹರಿಪ್ರಸಾದ್, ಈಗಾಗಲೇ ನಾವು ರಾಜೀನಾಮೆ ಕೇಳುತ್ತಿದ್ದೇವೆ, ಅದನ್ನ ಅವರು ಕೊಡಲೇಬೇಕು. ಡಿ.ಕೆ ಶಿವಕುಮಾರ್ ಮೇಲೆ ಆಪಾದನೆ ಮಾಡಿ ಏನೂ ಸಾಧಿಸಲಾಗದು ಎಂದು ಅವರು ಈಶ್ವರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.