ಮೈಸೂರು: ಜಗದ್ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಈ ಬಾರಿ ಸ್ತಬ್ಧಚಿತ್ರಗಳ ಅದ್ಧೂರಿ ಮೆರವಣಿಗೆ ವೈಭವ ಹೆಚ್ಚಿಸಿತು.
ಚಿನ್ನದ ಅಂಬಾರಿಯಲ್ಲಿ ಕಂಗೊಳಿಸುತ್ತಿದ್ದ ನಾಡದೇವಿ ಚಾಮುಂಡೇಶ್ವರಿಯನ್ನು ಹೊತ್ತ ಅಭಿಮನ್ಯು ಆನೆ ಲಕ್ಷಾಂತರ ಜನರನ್ನು ರಂಜಿಸಿತು. 750 ಕೆ.ಜಿ ತೂಕದ ಅಂಬಾರಿ ಹೊತ್ತ ಅಭಿಮನ್ಯು ಗಾಂಭೀರ್ಯದಿಂದ ಹೆಜ್ಜೆ ಹಾಕಿದ ದೃಶ್ಯ ಮನಮುಟ್ಟಿತು. ಕುಮ್ಕಿ ಆನೆಗಳು ಕಾವೇರಿ, ರೂಪಾ ಸಾಥ್ ನೀಡಿದವು.
ಅರಮನೆಯ ಬಲರಾಮ ದ್ವಾರದಿಂದ ಪ್ರಾರಂಭವಾದ ಜಂಬೂ ಸವಾರಿ, ಸುಮಾರು 5 ಕಿ.ಮೀ ಉದ್ದದ ಮಾರ್ಗದಲ್ಲಿ ಸಾಗಿತು. ಮಾರ್ಗಮಧ್ಯೆ ನಡೆದ 58 ಸ್ತಬ್ಧಚಿತ್ರಗಳು ಜನರ ಕುತೂಹಲ ಕೆರಳಿಸಿದವು. ರಾಜ್ಯ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರ ಮುಂದಿಡುವ ಉದ್ದೇಶದಿಂದ ಸ್ತಬ್ಧಚಿತ್ರಗಳನ್ನು ರೂಪಿಸಲಾಗಿತ್ತು. ವಿಶೇಷವಾಗಿ ಮಹಿಳೆಯರಿಗೆ ಉಚಿತ ಸಾರಿಗೆ ಒದಗಿಸಿರುವ ‘ಶಕ್ತಿ’ ಗ್ಯಾರೆಂಟಿ ಯೋಜನೆಯ ಸ್ತಬ್ಧಚಿತ್ರ ಜನಮೆಚ್ಚುಗೆಗೆ ಪಾತ್ರವಾಯಿತು. ಸಮಾಜದಲ್ಲಿ ಬದಲಾವಣೆಗೆ ಕಾರಣವಾಗಿರುವ ಈ ಯೋಜನೆಯ ಯಶಸ್ಸು ಮೆರವಣಿಗೆಯಲ್ಲಿ ಪ್ರತ್ಯಕ್ಷವಾಯಿತು.