ಉಡುಪಿ: ಬಹು ನಿರೀಕ್ಷಿತ ತುಳು ಚಿತ್ರ ‘ಶಕಲಕ ಬೂಂಬೂಂ’ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಯುಎನ್ ಸಿನೆಮಾಸ್ ಬ್ಯಾನರ್ ನಡಿ ನಿರ್ಮಾಣಗೊಂಡಿರುವ ‘ಶಕಲಕ ಬೂಂಬೂಂ’ ಚಿತ್ರ ಬಿಡುಗಡೆಗೆ ಮುನ್ನವೇ ಭಾರೀ ಪ್ರಚಾರ ಗಿಟ್ಟಿಸಿಕೊಂಡಿದೆ. ಈ ಚಿತ್ರದ ಟ್ರೈಲರ್ ಬುಧವಾರ ಬಿಡುಗಡೆಗೊಂಡಿದೆ. ಮಣಿಪಾಲದ ಭಾರತ್ ಸಿನೆಮಾಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂತಾರ ಚಿತ್ರದ ನಟಿ ಮಾನಸಿ ಸುಧೀರ್ ಅವರು ಟ್ರೈಲರ್ ಬಿಡುಗಡೆ ಮಾಡಿದರು.
ಕಾಮಿಡಿ, ಹಾರರ್, ಥ್ರಿಲ್ಲರ್, ಸಸ್ಪೆನ್ಸ್ ಸನ್ನಿವೇಶಗಳನ್ನು ಥಳುಕು ಹಾಕಿಕೊಂಡು ನಿರ್ಮಾವಾಗಿರುವ ಈ ಚಿತ್ರದ ಟ್ರೇಲರ್ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಲೈಕ್ಸ್ ಗಿಟ್ಟಿಸಿಕೊಳ್ಳುತ್ತಿದೆ.
ನಿತ್ಯಾನಂದ ನಾಯಕ್ ನರಸಿಂಗೆ, ಉಮೆಶ್ ಪ್ರಭು ಮಾಣಿಬೆಟ್ಟು ತಂಡ ನಿರ್ಮಾ ಮಾಡಿರುವ ಈ ಚಿತ್ರವನ್ನು ಶ್ರೀಶ ಎಳ್ಳಾರೆ ನಿರ್ದೇಶಿಸಿದ್ದಾರೆ. ಡಾಲ್ವಿನ್ ಕೊಳಲಗಿರಿ ಸಂಗೀತ ನೀಡಿದ್ದಾರೆ. ಪ್ರಜ್ವಲ್ ಸುವರ್ಣ ಹಾಗೂ ಪುತ್ತೂರು ಅರುಣ್ ರೈ ಅವರು ಕ್ಯಾಮರಾ ಕೈಚಳಕ ತೋರಿದ್ದಾರೆ.
ಚಿತ್ರದಲ್ಲಿ ಗಾಡ್ರಿನ್ ಸ್ಪಾರ್ಕಲ್ ನಾಯಕನಾಗಿ, ಲಕ್ಷಾ ಶೆಟ್ಟಿ ಹಾಗೂ ರೂಪಶ್ರೀ ನಾಯಕಿಯರಾಗಿ ನಟಿಸಿದ್ದಾರೆ. ಖ್ಯಾತ ನಟ ಅರವಿಂದ ಬೋಳಾರ್, ಉಮೇಶ್ ಮಿಜಾರ್, ಪ್ರವೀಣ್ ಮಾರ್ಕಮೆ, ಮಿಮಿಕ್ರಿ ಶರಣ್ , ಮನೋಹರ್ ಶೆಟ್ಟಿ, ನಂದಳಿಕೆ, ವಸಂತ್ ಮುನಿಯಾಲ್, ಹರೀಶ್ ಗಾಳಿಪಟ, ಸುನಿಲ್ ಕಡ್ತಲ, ಯತೀಶ್ ಪೂಜಾರಿ, ಯಶವಂತ್, ಪ್ರವೀಣ್ ಆಚಾರ್ಯ, ಕಾಮಿಡಿ ಕಿಲಾಡಿ ಖ್ಯಾತಿಯ ರಾಧೇಶ್, ಕಾಮಿಡಿ ಗ್ಯಾಂಗ್ ಖ್ಯಾತಿಯ ರಾಜೇಶ್ ದಾನಶಾಲೆ, ಲಂಚುಲಾಲ್, ರಾಜೇಶ್ವರಿ ಕುಲಾಲ್, ಧೀರಜ್, ಶಿವಾನಂದ, ಯಜ್ಞೆಶ್ ಶೆಟ್ಟಿ ಹಾಗೂ ಪ್ರಮುಖ ತಾರೆಯರು ಅಭಿನಯಿಸಿದ್ದಾರೆ.




















































