ಸರ್ಕಾರಿ ಶಾಲಾ ದತ್ತು ಪರಿಕಲ್ಪನೆ ದೇಶದಲ್ಲೇ ಪ್ರಥಮ: ಮುಖ್ಯಮಂತ್ರಿ
ಬೆಂಗಳೂರು: ಶಾಲೆಗಳನ್ನು ಜನಪ್ರತಿನಿಧಿಗಳು ಸೇರಿದಂತೆ ಸಮಾಜದ ವಿವಿಧ ಸಂಘ-ಸಂಸ್ಥೆಗಳು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುವಂತಹ ಪರಿಕಲ್ಪನೆ ದೇಶದಲ್ಲೇ ಮೊದಲನೆಯದಾಗಿದ್ದು, ಇದು ಉಳಿದವರಿಗೂ ಪ್ರೇರಣೆಯಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಆಶ್ರಯದಲ್ಲಿ ನಡೆದ ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಸಮಾರಂಭದಲ್ಲಿ ದತ್ತು ಸ್ವೀಕರಿಸಿದ ಸಂಸ್ಥೆಗಳಿಗೆ ಶಾಲಾ ದತ್ತು ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಸರ್ಕಾರದೊಂದಿಗೆ ಸಮುದಾಯವೂ ಕೈಜೋಡಿಸಿ ಶಾಲೆಗಳನ್ನು ಅಭಿವೃದ್ಧಿಗೆ ಕೈಜೋಡಿಸುತ್ತಿರುವುದು ವಿಶಿಷ್ಟವಾದ ಕಲ್ಪನೆಯಾಗಿದ್ದು, ಇದರಿಂದ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ನಾಂದಿ ಹಾಡಲಿದೆ ಎಂದರು.
2020-21ನೇ ಸಾಲಿನ ಆಯವ್ಯದಲ್ಲಿ ಘೋಷಿಸಿದಂತೆ ರಾಜ್ಯದ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಸದಸ್ಯರು ತಮ್ಮ ಅವಧಿಯಲ್ಲಿ ಕನಿಷ್ಠ ಮೂರು ಶಾಲೆಗಳನ್ನು ದತ್ತು ತೆಗೆದುಕೊಂಡು ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಮೂಲಕ ಅಭಿವೃದ್ಧಿ ಪಡಿಸುವುದು ಸೇರಿದಂತೆ ರಾಜ್ಯದ 34 ಹೆಚ್ಚು ಸರ್ಕಾರಿ ಹಾಗೂ ಖಾಸಗಿ ವಿಶ್ವವಿದ್ಯಾನಿಲಯಗಳು, ಶಿಕ್ಷಣ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು ದತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನಿಜಕ್ಕೂ ಪ್ರಶಂಸನೀಯ ಕಾರ್ಯವಾಗಿದೆ ಎಂದರು.