ಬೆಂಗಳೂರು: ವಿದ್ಯಾರ್ಥಿಗಳು ಮತ್ತು ಮಕ್ಕಳು ಕೋವಿಡ್ -19 ಸೋಂಕಿನಿಂದ ಬಾಧಿತರಾಗದಂತೆ ಖಾತ್ರಿಪಡಿಸಿಕೊಳ್ಳುವ ಸಲುವಾಗಿ ಅವರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕ್ರಿಯಾಯೋಜನೆ ರೂಪಿಸುವಂತೆ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.
ಶಾಲೆ ಮತ್ತು ಕಾಲೇಜುಗಳನ್ನು ತೆರೆಯುವ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾದುದಾಗಿದೆ. ಆದರೆ ಮಕ್ಕಳಲ್ಲಿ ಕೋವಿಡ್ -19 ಸಾಂಕ್ರಾಮಿಕವನ್ನು ನಿಗ್ರಹಿಸುವ ರೋಗನಿರೋಧಕ ಶಕ್ತಿ ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದೂ ಅಷ್ಟೇ ಮುಖ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸ್ಪೀಕರ್ ಕಾಗೇರಿ ಅವರು ಈ ಹಿಂದೆ 2008ರಿಂದ 2013ರವರೆಗೆ ರಾಜ್ಯದ ಶಿಕ್ಷಣ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹವಾಗಿದೆ. ಶಾಲೆಗಳಲ್ಲಿ ಕೋವಿಡ್ ಸಂಬಂಧಿತ ಗುಣಮಟ್ಟದ ಕಾರ್ಯಾಚರಣೆ ವಿಧಾನಗಳು –ಎಸ್.ಓ.ಪಿ. ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಹಠಾತ್ ಭೇಟಿ ನೀಡುವ ಸಲುವಾಗಿ ಸರ್ಕಾರ ಒಂದು ತಂಡವನ್ನು ನಿಯೋಜಿಸಬೇಕು ಎಂದೂ ಕಾಗೇರಿ ಅವರು ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.
“ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ವರ್ಧಿಸುವ ಅಗತ್ಯದ ಕುರಿತಂತೆ ಶಿಕ್ಷಕರು, ಶಿಕ್ಷಣ ಇಲಾಖೆಯ ಸಿಬ್ಬಂದಿ ಮಿಗಿಲಾಗಿ ಪಾಲಕರಲ್ಲಿ ಜಾಗೃತಿ ಮೂಡಿಸುವುದು ಮಹತ್ವದ್ದಾಗಿದೆ,” ಎಂದು ಸ್ಪೀಕರ್ ಪ್ರತಿಪಾದಿಸಿದ್ದಾರೆ.