ಬೆಂಗಳೂರು; ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಸಾರ್ವಜನಿಕರ ಆಕ್ರೋಶ ಸ್ಫೋಟವಾಗುತ್ತಲೇ ಇದೆ. ಅದರಲ್ಲೂ ಶಿಕ್ಷಣ ಕ್ಷೇತ್ರವನ್ನು ಬೊಮ್ಮಾಯಿ ಸರ್ಕಾರ ಮರೆತಂತಿದೆ ಎಂಬ ಆರೋಪವೂ ಕೇಳಿಬರುತ್ತಿದೆ.
ವಿವಿಧ ಕ್ಷೇತ್ರಗಳಿಗೆ ಕೋಟ್ಯಾಂತರ ರೂಪಾಯಿ ಅನುದಾನ ನೀಡಿರುವುದಾಗಿ ಪುಂಖಾನುಪುಂಕವಾಗಿ ಸಾರಿ ಹೇಳುತ್ತಿರುವ ಬೊಮ್ಮಾಯಿ ಸರ್ಕಾರ ಶಿಕ್ಷಣ ಕ್ಷೇತ್ರದ ವಿಚಾರದಲ್ಲಿ ‘ಸಾರಿ’ ಎಂದು ಹೇಳಿದಂತಿದೆ.
ಶಾಲಾ ವಿದ್ಯಾರ್ಥಿಗಳಿಗೆ ಸೂಕ್ತ ಶಿಕ್ಷಣ ಕಲ್ಪಿಸುವ ಸಂಬಂಧ ಅಗತ್ಯ ಕ್ರಮ ಕೈಗೊಂಡಿದ್ದಾಗಿ ಹೇಳಿಕೊಳ್ಳುತ್ತಿರುವ ಶಿಕ್ಷಣ ಸಚಿವ ಬಿ.ನಾಗೇಶ್ ಅವರಿಗೆ, ಇದೀಗ ಈ ಖಾತೆಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲವೇ? ಎಂಬ ಪ್ರಶ್ನೆ ಶಿಕ್ಷಣ ವಲಯದಲ್ಲೇ ಪ್ರತಿಧ್ವನಿಸಿದೆ.
ರಾಜ್ಯ ಸರ್ಕಾರದ ನಡೆಯನ್ನು ಗಮನಿಸಿದರೆ, ಕರ್ನಾಟಕದಲ್ಲಿ ಮಕ್ಕಳಿಗೆ ಸಮರ್ಪಕ ಶಿಕ್ಷಣ ಎಂಬುದು ಮರೀಚಿಕೆ ಎಂಬಂತಿದೆ. ಶಾಲಾ ಮಕ್ಕಳಿಗೆ ಕಲಿಕೆಗೆ ಅಗತ್ಯವಿರುವುದೇನು? ಯಾವಾಗ ಅದು ಸೂಕ್ತ? ಶಾಲಾರಂಭ ಯಾವಾಗ ಆಗಿರೋದು? ಶೈಕ್ಷಣಿಕ ವರ್ಷ ಮುಗಿಯುವುದರೊಳಗೆ ಪುಸ್ತಕ, ಸಮವಸ್ತ್ರ ಯಾವಾಗ ಪೂರೈಸಬೇಕೆಂಬ ಅರಿವೇ ಇಲ್ಲದಂತಿದೆ ಸರ್ಕಾರ.
ಈ ವಿಚಾರದಲ್ಲಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಶಿಕ್ಷಣ ಸಚಿವರ ಬಗ್ಗೆ ಬಗೆ ಬಗೆಯ ಪ್ರತಿಕ್ರಿಯೆ ಹೆಚ್ಚಿವೆ. ಈ ಬೆಳವಣಿಗೆಯು ಪ್ರತಿಪಕ್ಷಗಳ ಅಭಿಪ್ರಾಯಗಳಲ್ಲೂ ಪ್ರತಿಧ್ವನಿಸಿದೆ. ಅರ್ಧ ವರ್ಷ ಕಳೆದರೂ ಪಠ್ಯ ಪುಸ್ತಕ ನೀಡಲಾಗದ ಶಿಕ್ಷಣ ಸಚಿವ ಧ್ಯಾನ ಮಾಡಿಸಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಸದ್ಯದ ಪರಿಸ್ಥಿತಿ ಬಗ್ಗೆ ವ್ಯಂಗ್ಯವಾಡಿದೆ.
ಪಠ್ಯಪುಸ್ತಕ, ಶೂ, ಸಾಕ್ಸ್, ಯುನಿಫಾರ್ಮ್‌ಗಳನ್ನು ನೀಡಲು ಯೋಗ್ಯತೆ ಇಲ್ಲದ ಶಿಕ್ಷಣ ಸಚಿವ ನಾಗೇಶ್ ಎಂಬ ಅಸಮರ್ಥ ಸಚಿವರ ಕೈಯ್ಯಲ್ಲಿ ಮಕ್ಕಳ ಭವಿಷ್ಯಕ್ಕೆ ಕತ್ತಲಾವರಿಸಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.



















































