ದೆಹಲಿ: ವಾಯು ಮಾಲಿನ್ಯವು ರಾಷ್ಟ್ರ ರಾಜಧಾನಿ ದೆಹಲಿ ಜನರ ಪಾಲಿಗೆ ಸವಾಲೆಂಬಂತಾಗಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ್ದು, ಕೆಲವು ದಿನಗಳಿಂದ ನೀಡುತ್ತಿರುವ ನಿರ್ದೇಶನಗಳು ಗಮನಾರ್ಹ ಸಂಗತಿಯಾಗಿದೆ.
ಈ ನಡುವೆ, ವಾಯು ಮಾಲಿನ್ಯ ಸಮಸ್ಯೆ ಬಗೆಹರಿಸುವ ಸಂಬಂಧ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಸೋಮವಾರ ಪರಾಮರ್ಶೆ ನಡೆಸಿದ ಸುಪ್ರೀಂ ಕೋರ್ಟ್, ಎನ್‌ಸಿಆರ್ (ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ) ವ್ಯಾಪ್ತಿಯಲ್ಲಿನ ವಾಯು ಮಾಲಿನ್ಯದ ಸಮಸ್ಯೆಗೆ ಕಾರಣಗಳು ಏನೆಂಬ ಬಗ್ಗೆಯೂ ಗಮನಹರಿಸಿತು. ಈ ಗಂಭೀತ ಸಮಸ್ಯೆ ಪರಿಹರಿಸುವ ಸಂಬಂಧ ಮಂಗಳವಾರ ತುರ್ತು ಸಭೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
ಜೊತೆಗೆ, ಎನ್‌ಸಿಆರ್ ವ್ಯಾಪ್ತಿಯಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸಲು ನಿರ್ಮಾಣ ಕಾರ್ಯಗಳನ್ನು ಸ್ಥಗಿತಗೊಳಿಸುವುದು, ಅನಗತ್ಯ ವಾಹನ ಸಂಚಾರ ನಿಲ್ಲಿಸುವುದು, ವಿದ್ಯುತ್ ಘಟಕಗಳ ಕಾರ್ಯಾಚರಣೆಗೂ ಲಗಾಮು ಹಾಕುವಂತಹಾ ಕ್ರಮಗಳ ಕುರಿತು ಸಲಹೆ ನೀಡಿದ ನ್ಯಾಯಮೂರ್ತಿಗಳು, ನಾಗರೀಕರಿಗೆ ವರ್ಕ್ ಫ್ರಂ ಹೋಂ ಕಡ್ಡಾಯಗೊಳಿಸುವಂತೆ ಸೂಚಿಸಿದ್ದಾರೆ.
ವಾಯು ಮಾಲಿನ್ಯ ಹೆಚ್ಚಲು ಕಾರಣಗಳು..
ಎನ್‌ಸಿಆರ್ ಪ್ರದೇಶಗಳನ್ನು ಹೊಂದಿರುವ ದೆಹಲಿ, ಪಂಜಾಬ್, ಉತ್ತರಪ್ರದೇಶ ಮತ್ತು ಹರಿಯಾಣದ ಹಲವೆಡೆ ಕೈಗಾರಿಕೆಗಳು ಹೆಚ್ಚಿವೆ. ಅವುಗಳ ಮಾಲಿನ್ಯದ ಜೊತೆಗೆ ಧೂಳು, ಸಾರಿಗೆ ವಾಹನಗಳು, ವಾಹನ ದಟ್ಟಣೆಯೂ ಪ್ರಮುಖ ಕಾರಣ ಎನ್ನಲಾಗಿದೆ. ಅಷ್ಟೇ ಅಲ್ಲ, ಕೆಲವು ಪ್ರದೇಶಗಳಲ್ಲಿ ರೈತರು ಹೊಲಕ್ಕೆ ಬೆಂಕಿಹಚ್ಚುವುದರಿಂದಾಗಿ ಈ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎಂಬುದು ತಜ್ಞರ ಅಭಿಮತ. ಈ ವಿಷಯಗಳ ಬಗ್ಗೆಯೇ ಸುಪ್ರೀಂ ಕೋರ್ಟ್ ಗಮನ ಕೇಂದ್ರೀಕರಿಸಿದೆ.