ಮಂಗಳೂರು: ಸಾಮಾಜಿಕ ಜಾಗೃತಿ, ಧಾರ್ಮಿಕ ಕೈಂಕರ್ಯದ ಅದ್ಧೂರಿ ವೈಭವಕ್ಕೆ ಸಾಕ್ಷಿಯಾಗುವ ಗಣೇಶೋತ್ಸವ ಸಡಗರ ಬಂದರು ನಗರಿ ಮಂಗಳೂರಿನಲ್ಲೂ ಗರಿಗೆದರಿದೆ. ಭಗವಾಧ್ವಜದ ನೆರಳಲ್ಲಿರುವ ಸಂಘನಿಕೇತನದಲ್ಲಂತೂ ಅದ್ದೂರಿ ವೈಭವ ಮೇಳೈಸಿದೆ.
ಸಂಘದ ಸಂಪ್ರದಾಯ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪಿಸಿ ಪೂಜಿಸುವ ಸಂಘನಿಕೇತನದ ಅನನ್ಯ ವೈಭವ ಈ ಬಾರಿಯೂ ಆಸ್ತಿಕರ ಗಮನಕೇಂದ್ರೀಕರಿಸಿದೆ.

74ನೇ ಸಾರ್ವಜನಿಕ ಗಣೇಶೋತ್ಸವ
ಮಂಗಳೂರಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಾಲಯ ಸಂಘನಿಕೇತನದಲ್ಲಿ ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಅದರದ್ದೇ ಆದ ಮಹತ್ವವಿದೆ. ಇತರೆಡೆಯ ಉತ್ಸವಗಳಿಗೆ ಹೋಲಿಸಿದರೆ ಇಲ್ಲಿನ ಆಚರಣೆ, ಶಾಸ್ತ್ರೋಕ್ತ ವಿಧಿವಿಧಾನಗಳು ವಿಭಿನ್ನ. ನಿತ್ಯವೂ ಧಾರ್ಮಿಕ ಕೈಂಕರ್ಯದ ಜೊತೆಗೆ ದೇಶಭಕ್ತಿಯ ವೈಭವವೂ ಮೇಳೈಸುತ್ತದೆ. ಈ ಬಾರಿಯೂ ಈ ಅನನ್ಯ ಕೈಂಕರ್ಯಕ್ಕೆ ಮುನ್ನುಡಿ ಬರೆಯಲಾಗಿದೆ.
ಸಂಘನಿಕೇತನದಲ್ಲಿ ಈ ಬಾರಿ ಅತ್ಯಂತ ಸರಳ ರೀತಿಯ ಆಚರಣೆ. ಈ ಪ್ರಯುಕ್ತ ಶ್ರೀ ದೇವರ ಮ್ರಿತಿಕೆಯ ವಿಗ್ರಹವನ್ನು ಗುರುವಾರ ಮೆರವಣಿಗೆಯಲ್ಲಿ ತರಲಾಯಿತು. ಶುಕ್ರವಾರ ಬೆಳೆಗ್ಗೆ ಸಾರ್ವಜನಿಕ ಗಣೇಶೋತ್ಸವದ ಉದ್ಘಾಟನೆ ನೆರವೇರಲಿದೆ. ಬಳಿಕ ಶ್ರೀ ದೇವರ ವಿಗ್ರಹ ಪ್ರತಿಷ್ಠಾಪನೆ , ಗಣಹೋಮ, ರಾತ್ರಿ ಮೂಡಗಣಪತಿ ಸೇವೆ , ರಂಗ ಪೂಜೆ ಬಳಿಕ ಮಂಗಳಾರತಿ ನಡೆಯಲಿದೆ . ಐದು ದಿನಗಳ ಪರ್ಯಂತ ಸಂಘನಿಕೇತನದಲ್ಲಿ ಈ ಕೈಂಕರ್ಯ ನೆರವೇರಲಿದೆ.

ಮಹಾಮಾರಿ ಕೊರೋನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಸರಕಾರದ ಆದೇಶ ಪ್ರಕಾರ ಎಲ್ಲ ರೀತಿಯಲ್ಲಿ ನಿಯಮ ಪಾಲಿಸಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಗಣೇಶ ವಿಗ್ರಹ ತಂದ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್, ರಘುವೀರ್ ಕಾಮತ್, ವಿನೋದ್ ಶೆಣೈ , ಜೀವನರಾಜ್ ಶೆಣೈ, ಸತೀಶ್ ಪ್ರಭು, ಸುರೇಶ ಕಾಮತ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.