ಜೈಪುರ: “ಪಂಡಿತ್ ದೀನದಯಾಳ್ ಉಪಾಧ್ಯಾಯರು ದೇಶ–ಕಾಲ–ಪರಿಸ್ಥಿತಿಗಳಿಗೆ ತಕ್ಕಂತೆ ‘ಸಮಗ್ರ ಮಾನವ ತತ್ವ’ವನ್ನು ರೂಪಿಸಿ, ಸನಾತನ ತತ್ತ್ವಶಾಸ್ತ್ರಕ್ಕೆ ಆಧುನಿಕ ಜಗತ್ತಿನಲ್ಲಿ ಹೊಸ ಅರ್ಥ ನೀಡಿದ್ದಾರೆ,” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗವತ್ ಹೇಳಿದರು.
ಜೈಪುರದಲ್ಲಿ ಸಮಗ್ರ ಮಾನವ ತತ್ವಶಾಸ್ತ್ರ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಆಯೋಜಿಸಿದ್ದ ದೀನದಯಾಳ್ ಸ್ಮಾರಕ ಉಪನ್ಯಾಸವನ್ನು ಉದ್ದೇಶಿಸಿ ಮಾತನಾಡಿದ ಅವರು, “ಆರು ದಶಕಗಳ ಹಿಂದೆ ಪ್ರಸ್ತುತಪಡಿಸಲಾದ ಈ ತತ್ತ್ವವು ಇಂದು ಜಗತ್ತಿನಾದ್ಯಂತ ಪ್ರಸ್ತುತತೆಯನ್ನು ಪಡೆದುಕೊಂಡಿದೆ” ಎಂದರು.
ಸಮಗ್ರ ಮಾನವ ತತ್ವಶಾಸ್ತ್ರದ ಸಾರವನ್ನು ‘ಧರ್ಮ’ ಎಂಬ ಒಂದೇ ಪದದಲ್ಲಿ ಅರ್ಥೈಸಬಹುದು ಎಂದು ಭಾಗವತ್ ತಿಳಿಸಿದರು. “ಈ ಧರ್ಮವು ಪಂಥ, ಮತ ಅಥವಾ ಆಚಾರವಿಚಾರಗಳನ್ನು ಸೂಚಿಸುವುದಲ್ಲ; ಅದು ಎಲ್ಲರನ್ನು ಒಳಗೊಳ್ಳುವ, ಮಾನವಕೋಟಿಗೆ ದಿಕ್ಕು ತೋರುವ ಸಮಗ್ರ ದೃಷ್ಟಿಕೋನ” ಎಂದರು.
ಭಾರತೀಯರ ಜೀವನಶೈಲಿ, ಆಹಾರ–ವಸ್ತ್ರಗಳು ಕಾಲಾಂತರದಲ್ಲಿ ಬದಲಾಗಿದ್ದರೂ, ಅವಿಭಾಜ್ಯ ಮಾನವತೆಯ ಶಾಶ್ವತ ಮೌಲ್ಯಗಳು ಯಥಾರೂಪದಲ್ಲಿ ಉಳಿದಿವೆ ಎಂದು ಅವರು ಹೇಳಿದರು. “ಸಂತೋಷವು ಹೊರಗಲ್ಲ, ತನ್ನೊಳಗೇ ಇದೆ ಎಂಬುದು ಈ ತತ್ತ್ವದ ಗರ್ಭ. ಈ ಮನೋಭಾವ ಮಾನವಕುಲ ಒಂದು ಎನ್ನುವ ಬೋಧನೆಯನ್ನು ಕೊಡುತ್ತದೆ. ಇದು ಯಾವುದೇ ರೀತಿಯ ಉಗ್ರತೆಯಿಲ್ಲದ ತತ್ತ್ವ” ಎಂದರು.
ವೈಜ್ಞಾನಿಕ ಪ್ರಗತಿ–ಆರ್ಥಿಕತೆ–ಆರೋಗ್ಯ:
ಭಾಗವತ್, ದೈಹಿಕ–ಮಾನಸಿಕ–ಬೌದ್ಧಿಕ ಶಕ್ತಿಗಳ ಮಿತಿಯನ್ನು ಉಲ್ಲೇಖಿಸಿ, “ವೈಯಕ್ತಿಕ ಪ್ರಗತಿಯನ್ನು ಸಮಾಜಮುಖಿಯಾಗಿ ಬಳಸುವ ಧೋರಣೆ ಇಂದಿನ ಅಗತ್ಯ” ಎಂದರು. ಜಾಗತಿಕ ಆರ್ಥಿಕ ಅಸ್ಥಿರತೆಯಲ್ಲಿಯೂ ಭಾರತದ ಆರ್ಥಿಕ ನೆಲೆಯಲ್ಲಿ ಕುಟುಂಬ ವ್ಯವಸ್ಥೆಯ ಪಾತ್ರ ಮಹತ್ತರವಾಗಿದ್ದು, ಅದರ ಮೇಲೆ ಆಘಾತ ಕಡಿಮೆ ಎಂದು ಹೇಳಿದರು.
ವಿಜ್ಞಾನ ತ್ವರಿತವಾಗಿ ಬೆಳೆದರೂ ಶಾಂತಿ ಮತ್ತು ತೃಪ್ತಿ:
ಹೆಚ್ಚದಿರುವುದನ್ನು ಅವರು ಪ್ರಶ್ನಿಸಿದರು. “ಔಷಧಿಗಳು ಹೆಚ್ಚಾಗಿವೆ, ಆದರೆ ಆರೋಗ್ಯ ನಿಜವಾಗಿಯೂ ಸುಧಾರಿಸಿದ್ದೇ? ಕೆಲವು ಕಾಯಿಲೆಗಳು ಕೆಲವು ಚಿಕಿತ್ಸೆಗಳೇ ಕಾರಣವಾಗಿರುವ ಉದಾಹರಣೆಗಳಿವೆ” ಎಂದು ಸೂಚಿಸಿದರು.
ಜಗತ್ತಿನ 4% ಜನರು 80% ಸಂಪನ್ಮೂಲಗಳನ್ನು ಬಳಸುತ್ತಿರುವ ಅಸಮಾನತೆಯನ್ನು ಉಲ್ಲೇಖಿಸಿದ ಅವರು, ಇದು ರಾಷ್ಟ್ರಗಳ ನಡುವಿನ ಅಂತರವನ್ನು ವಿಸ್ತರಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಭಾರತೀಯ ಸಮಾಜವು ವೈವಿಧ್ಯತೆಯನ್ನು ಸಂಘರ್ಷದ ಮೂಲವನ್ನಾಗಿಸದೆ, ಸಂಭ್ರಮದ ಸ್ಥಿತಿಗೆ ಏರಿಸಿದೆ ಎಂದು ಭಾಗವತ್ ಹೇಳಿದರು. “ಬೇರೆ ಬೇರೆ ದೈವಿಸಂಕಲ್ಪಗಳನ್ನು, ಆಚರಣೆಗಳನ್ನು ಸ್ವೀಕರಿಸುವ ಸಾಮರ್ಥ್ಯವೇ ಭಾರತದ ವಿಶೇಷತೆ” ಎಂದರು.























































