ಬೆಂಗಳೂರು: ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್ ಅವರು ಮುಖ್ಯಮಂತ್ರಿಯಾಗಲಿ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಬ್ಯಾಟಿಂಗ್ ಮಾಡಿದ್ದಾರೆ. ಅತ್ಯುತ್ತಮ ಕರ್ತವ್ಯ ಪ್ರಜ್ಞೆ ಹಾಗೂ ಸದ್ದಿಲ್ಲದೆ ತಮ್ಮ ಪಾಡಿಗೆ ತಾವು ನಿಷ್ಠೆಯಿಂದ ಕೆಲಸ ಮಾಡಿಕೊಂಡು ಹೋಗುತ್ತಿರುವ ಡಾ.ಸಿ.ಎನ್.ಅಶ್ವತ್ಥನಾರಾಯಣರ ಪದವಿ ಮುಂದಿರುವ ʼಉಪʼ ಹೋಗಿ ಆದಷ್ಟು ಬೇಗ ʼಮುಖ್ಯಮಂತ್ರಿʼ ಎಂಬ ಪದನಾಮ ಬರುವಂತಾಗಲಿ. ಅದಕ್ಕೆ ಬೇಕಾದ ಎಲ್ಲ ಕೃಪೆ-ಚೈತನ್ಯವನ್ನು ಆ ಪರಮಶಿವ ನೀಡಲಿ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ಶುಭ ಹಾರೈಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರದಲ್ಲಿ ಗುರುವಾರ ರಾತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಫೌಂಡೇಷನ್ ಆಯೋಜಿಸಿದ್ದ ಮಹಾ ಶಿವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಸದಾನಂದಗೌಡ, ಅಶ್ವತ್ಥನಾರಾಯಣ ಕೇವಲ ಮಾತನಾಡುತ್ತಲೇ ಕೆಲಸ ಮಾಡುವ ವ್ಯಕ್ತಿಯಲ್ಲ. ಅಬ್ಬರ ಇಲ್ಲ, ಆಡಂಬರ ಇಲ್ಲದ ವ್ಯಕ್ತಿ. ಅವರು ಮಾಡುತ್ತಿರುವ ಉತ್ತಮ ಕೆಲಸಗಳೇ ಅವರ ಬಗ್ಗೆ ಮಾತನಾಡುತ್ತಿವೆ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಬಿಡುವಿಲ್ಲದ ಕೆಲಸಗಳಲ್ಲಿ ತೊಡಗಿಬಿಡುತ್ತಾರೆಂದು ನುಡಿದರು.
ನಮ್ಮ ನಡುವಿನ ರಾಜಕಾರಣಿಗಳಲ್ಲಿ ಮಾತನಾಡುವವರೇ ಜಾಸ್ತಿ. ಇದಕ್ಕೆ ಅಶ್ವತ್ಥನಾರಾಯಣ ಅಪವಾದ. ಅವರದ್ದು ಮಾತು ಕನಿಷ್ಠ, ಕೆಲಸ ಗರಿಷ್ಠ ಎನ್ನುವ ನೀತಿ. ಈ ಪರಿಶ್ರಮವೇ ಅವರನ್ನು ಮುಂದೊಂದು ದಿನ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲಿದೆ ಎಂದು ಗೌಡರು ಹೇಳಿದರು.
ಮಲ್ಲೇಶ್ವರ ಕ್ಷೇತ್ರದಲ್ಲಿ ಅದೆಷ್ಟೋ ಮಹಾನುಭಾವರು ಇದ್ದಾರೆ. ಕವಿಗಳು, ವಿಜ್ಞಾನಿಗಳು, ಪಂಡಿತರು, ಪದ್ಮಗಳು- ಭಾರತ ರತ್ನಗಳು ಇದ್ದಾರೆ. ಮುಂದಿನ ದಿನಗಳಲ್ಲಿ ಇದೇ ಕ್ಷೇತ್ರದಿಂದ ಒಬ್ಬ ಮುಖ್ಯಮಂತ್ರಿಯೂ ಹೊರಹೊಮ್ಮಲಿ ಎಂದು ಸದಾನಂದ ಗೌಡರು ಹೇಳಿದರು.
ಮಲ್ಲೇಶ್ವರದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ನೃತ್ಯ, ಹಾಸ್ಯ, ಸಂಗೀತ ಮೇಳೈಸಿದ ಸಾಂಸ್ಕೃತಿಕ ಜಾಗರಣೆ ಕಾರ್ಯಕ್ರಮ ಗಮನಸೆಳೆಯಿತು. ಸಂಗೀತ ಮತ್ತು ನೃತ್ಯದ ಮೂಲಕ ಶಿವಸ್ಮರಣೆ ಮಾಡಿಕೊಂಡು ಭಕ್ತರಿಗೆ ಮುದವುಂಟು ಮಾಡುವುದರ ಜತೆಗೆ, ಜಾಗತಿಕವಾಗಿ ಹೆಸರು ಮಾಡಿರುವ ಅನೇಕ ಖ್ಯಾತ ಕಲಾವಿದರು ಉತ್ಸವದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದರು. ವೈವಿಧ್ಯಮಯ ಕಾರ್ಯಕ್ರಮಗಳು ಇಡೀ ರಾತ್ರಿ ಪ್ರೇಕ್ಷಕರ ಮನಸೂರೆಗೊಂಡವು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ವೆಂಕಟೇಶ್, ನಿವೃತ್ತ ಪೋಲೀಸ್ ಅಧಿಕಾರಿ ಬಿ.ಕೆ.ಶಿವರಾಮ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.