ಮತ್ತೆ ಭುಗಿಲೆದ್ದ ಹಿಂಸಾಚಾರ.. ಆರ್‌ಎಸ್.ಎಸ್ ಕಾರ್ಯಕರ್ತನ ಬರ್ಬರ ಕೊಲೆ.. ಘಟನೆ ಬಗ್ಗೆ ಸಂಘ ಪರಿವಾರದ ಮುಖಂಡರ ಆಕ್ರೋಶ..
ಅಲಪುಳ: ಆರ್‌ಎಸ್‌ಎಸ್ ಮತ್ತು ಎಸ್‌ಡಿಪಿಐ ಕಾರ್ಯಕರ್ತರ ನಡುವಿನ ಘರ್ಷಣೆ ನಡುವೆ ಸಂಘ ಪರಿವಾರದ ಕಾರ್ಯಕರ್ತನೊಬ್ಬನ ಬರ್ಬರ ಕೊಲೆಯಾಗಿದೆ. ಕೇರಳದ ಅಲಪುಳಜಿಲ್ಲೆಯ ಚೆರ್ತಲಾ ಬಳಿ ಈ ಘಟನೆ ನಡೆದಿದೆ.
ಚೆರ್ತಲಾ ಬಳಿಯ ನಾಗಮಕುಲಂಗರದಲ್ಲಿ ಬುಧವಾರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು ಆ ವೇಳೆಗಾಗಲೇ ಆರ್‌ಎಸ್‌ಎಸ್ ಕಾರ್ಯಕರ್ತ ನಂದು ಎಂಬ ಯುವಕನ ಮೇಲೆ ಮಾರಣಾಂತಿಕ ದಾಳಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ನಂದು ಮೃತಪಟ್ಟಿದ್ದು ಇನ್ನೂ ಕೆಲವರ ಮೇಲೆ ಹಲ್ಲೆಗಳಾಗಿವೆ. ಈ ಪೈಕಿ ನಾಲ್ವರಿಗೆ ಗಂಭೀರವಾಗಿ ಗಾಯಗಳಾಗಿವೆ ಎನ್ನಲಾಗಿದೆ.
ಆರ್‌ಎಸ್‌ಎಸ್ ಕಾರ್ಯಕರ್ತನ ಕೊಲೆಯನ್ನು ಬಿಜೆಪಿ ಹಾಗೂ ಸಂಘಪರಿವಾರದ ಮುಖಂಡರು ಖಂಡಿಸಿದ್ದಾರೆ. ಘಟನೆಯನ್ನು ಖಂಡಿಸಿರುವ ಕೇರಳ ಬಿಜೆಪಿ ನಾಯಕ ಸುರೇಂದ್ರನ್, ಇಂತಹಾ ಘಟನೆಗೆ ಕಾರಣವಾಗುತ್ತಿರುವ ಪಿಎಫ್‌ಐ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.