ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಹಿಂದಿನ ಬಿಜೆಪಿ ಸರ್ಕಾರ ಮಂಜೂರು ಮಾಡಿರುವ ಗೋಮಾಳ ಜಮೀನನ್ನು ಮರು ಸ್ವಧೀನಕ್ಕೆ ಪಡೆಯಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ. RSSನ ಪರಿವಾರ ಸಂಘಟನೆಗೆ ಹಿಂದಿನ ಬಿಜೆಪಿ ಸರ್ಕಾರ ಮಂಜೂರು ಮಾಡಿದ್ದ ನೂರಾರು ಎಕರೆ ಸರ್ಕಾರಿ ಭೂಮಿಯನ್ನು ವಾಪಸ್ ಪಡೆಯಲು ಸರ್ಕಾರ ಕ್ರಮ ತೆಗೆದುಕೊಂಡಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಸಂಘಪರಿವಾರದ ಜನಸೇವಾ ಟ್ರಸ್ಟ್‌ಗೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕುರುಬರಹಳ್ಳಿ ಸಮೀಪದ ತಾವರೆಕೆರೆ ಹೋಬಳಿಯಲ್ಲಿ ಹಿಂದಿನ ಬಿಜೆಪಿ ಸರ್ಕಾರ 35 ಎಕರೆ 33 ಗುಂಟೆ ಗೋಮಾಳ ಜಮೀನು ನೀಡಿತ್ತು. 2023ರ ಮೇ 22ರಂದು ಜಿಲ್ಲಾಧಿಕಾರಿ ಈ ಸಂಬಂಧ ಮಂಜೂರು ಆದೇಶ ಹೊರಡಿಸಿದ್ದರು ಎಂದಿರುವ ಸಚಿವ ಕೃಷ್ಣ ಬೈರೇಗೌಡ, ಗೋಮಾಳವು ಜಾನುವಾರುಗಳ ಮೇವಿಗಾಗಿ ಮೀಸಲಿರಿಸಿದ ಸರ್ಕಾರಿ ಭೂಮಿಯಾಗಿದ್ದು ಅದನ್ನು ಖಾಸಗಿಯವರ ಸ್ವಾಧೀನಕ್ಕೆ ನೀಡಲಾಗಿದೆ ಎಂದರು.