ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಕ್ರೌರ್ಯವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಖಂಡಿಸಿದೆ. ಮಹಿಳೆಯರ ಮೇಲೆ ದೌರ್ಜನ್ಯ, ಹಿಂದೂ ಶ್ರದ್ದಾಕೇಂದ್ರಗಳ ಮೇಲೆ ನಡೆದಿರುವ ದಾಳಿ ಘಟನೆಗಳು ಕಳವಳಕಾರಿ ಬೆಳವಣಿಗೆಯಾಗಿದ್ದು, ಅಲ್ಲಿನ ಮಧ್ಯಂತರ ಸರ್ಕಾರವು ಇಂತಹಾ ಕ್ರೌರ್ಯಗಳಿಗೆ ಅಂತ್ಯ ಹಾಡಬೇಕಿದೆ ಎಂದು ಸಂಘ ಪ್ರತಿಪಾದಿಸಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಬಾಂಗ್ಲಾದೇಶದ ಘಟನೆಗಳ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸುವುದನ್ನು ಸಹಿಸಲಾಗದು ಎಂದಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ ಆಡಳಿತ ಬದಲಾವಣೆಯ ಚಳವಳಿಯ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳು, ಬೌದ್ಧರು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧದ ಹಿಂಸಾಚಾರದ ಘಟನೆಗಳ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಗಂಭೀರ ಕಳವಳ ವ್ಯಕ್ತಪಡಿಸುತ್ತದೆ ಎಂದಿರುವ ಅವರು, ಹತ್ಯೆ, ಲೂಟಿ, ಬೆಂಕಿ ಹಚ್ಚುವುದು ಮತ್ತು ಹಿಂದೂ ಹಾಗೂ ಇತರ ಧಾರ್ಮಿಕ ಅಲ್ಪಸಂಖ್ಯಾತ ಮಹಿಳೆಯರ ಮೇಲಿನ ದೌರ್ಜನ್ಯಗಳು ಖಂಡನೀಯ. ಬಾಂಗ್ಲಾದೇಶದ ಹಿಂದೂ ಮಂದಿರಗಳ ಮೇಲಿನ ದಾಳಿಗಳಂತಹ ಕ್ರೌರ್ಯವನ್ನು ಸಹಿಸಲಾಗದು ಎಂದಿದ್ದಾರೆ.
ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಇಂತಹ ಘಟನೆಗಳನ್ನು ತಕ್ಷಣವೇ ನಿಲ್ಲಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಅಲ್ಲದೆ, ಸಂತ್ರಸ್ತರ ಜೀವ, ಆಸ್ತಿ ಮತ್ತು ಗೌರವವನ್ನು ರಕ್ಷಿಸಲು ಸರ್ಕಾರ ಸರಿಯಾದ ವ್ಯವಸ್ಥೆ ಮಾಡಬೇಕು ಎಂದು ದತ್ತಾತ್ರೇಯ ಹೊಸಬಾಳೆ ಅವರು ಸಂದೇಶ ನೀಡಿದ್ದಾರೆ.
ವಿಶ್ವ ಸಮುದಾಯ ಮತ್ತು ಭಾರತದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳು ಈ ಸಂದಿಗ್ಧ ಸಮಯದಲ್ಲಿ ಹಿಂದೂ, ಬೌದ್ಧ ಮುಂತಾದ ಶೋಷಿತ ಸಮುದಾಯಗಳೊಂದಿಗೆ ಒಗ್ಗಟ್ಟಿನಿಂದ ನಿಲ್ಲಬೇಕೆಂದು ಕರೆ ಕೊಟ್ಟಿರುವ ಅವರು, ಸ್ನೇಹಪರ ನೆರೆಹೊರೆಯವರಾಗಿ, ಬಾಂಗ್ಲಾದೇಶದ ಈ ಪರಿಸ್ಥಿತಿಯಲ್ಲಿ ಭಾರತ ಸರ್ಕಾರವು ಸಮರ್ಥ ಪಾತ್ರವನ್ನು ವಹಿಸಲು ಪ್ರಯತ್ನಿಸುತ್ತಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳು, ಬೌದ್ಧರು ಇತ್ಯಾದಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲ ಪ್ರಯತ್ನಗಳನ್ನು ಮಾಡಬೇಕೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.