ನವದೆಹಲಿ: ರಾಷ್ಟ್ರಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ತನ್ನ ಸ್ಥಾಪನೆಯ 100 ವರ್ಷಗಳನ್ನು ಪೂರೈಸಿ 101ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಆರ್‌ಎಸ್‌ಎಸ್ ಶತಮಾನೋತ್ಸವ ಗಮನಸೆಳೆದಿದೆ.
1925ರ ವಿಜಯದಶಮಿಯಂದು ಡಾ. ಕೇಶವ್ ಬಲಿರಾಮ ಹೆಡ್ಗೆವಾರ್ ಸಂಘವನ್ನು ಸ್ಥಾಪಿಸಿದ್ದರು. ಈ ಸಂಘಟನೆಗೆ ಇದೀಗ ಶತಮಾನೋತ್ಸವ. ಈ ಹಿನ್ನೆಲೆಯಲ್ಲಿ, ದೆಹಲಿಯಲ್ಲಿ ವಿಜಯದಶಮಿ ಪೂಜೆ ಹಾಗೂ ಪಥಸಂಚಲನಗಳನ್ನು ಅದ್ದೂರಿಯಾಗಿ ಆಯೋಜಿಸಲಾಯಿತು. ಶಾಸ್ತ್ರಪೂಜೆ ಮತ್ತು ಪಥಮೆರವಣಿಗೆಗಳು ಸೇರಿದಂತೆ ದೇಶಾದ್ಯಂತ 346 ಸ್ಥಳಗಳಲ್ಲಿ ಕಾರ್ಯಕ್ರಮಗಳು ಜರುಗಿದವು.
ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಸ್ವಯಂಸೇವಕರು ಸಂಪೂರ್ಣ ಸಮವಸ್ತ್ರದಲ್ಲಿ ಸಾಂಪ್ರದಾಯಿಕ ಸಂಘ ಘೋಷ್ ಜೊತೆ ಪಥಸಂಚಲನ ನಡೆಸಿದರು. ಅನೇಕರು ವ್ಯವಸ್ಥಾಪನಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಪಥಸಂಚಲನ ಹಾದುಹೋದ ಮಾರ್ಗದಲ್ಲಿ ನಾಗರಿಕರು ಪುಷ್ಪಾರ್ಚನೆ ಮೂಲಕ ಸ್ವಾಗತಿಸಿದರು.
ಆರ್‌ಎಸ್‌ಎಸ್ ರಾಷ್ಟ್ರೀಯ ಹಾಗೂ ಪ್ರಾಂತೀಯ ನಾಯಕರು ವಿವಿಧ ಕೇಂದ್ರಗಳಲ್ಲಿ ಭಾಗವಹಿಸಿ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದರು. ಪಶ್ಚಿಮ ವಿಹಾರ್‌ನಲ್ಲಿ ಡಾ. ಅನಿಲ್ ಅಗರ್ವಾಲ್ ಮತ್ತು ಇಂದ್ರೇಶ್ ಕುಮಾರ್, ಬಿಜ್ವಾಸನ್‌ನಲ್ಲಿ ಭರತ್‌ಜಿ, ಕೊಂಡ್ಲಿಯಲ್ಲಿ ಮುರಳಿಜಿ, ಉತ್ತಮ್ ನಗರದಲ್ಲಿ ಅನಿಲ್ ಗುಪ್ತಾ, ದೆಹಲಿ ವಿಶ್ವವಿದ್ಯಾಲಯದಲ್ಲಿ ವಿಶಾಲ್ ಕಾರ್ಯಕ್ರಮಗಳಲ್ಲಿ ಹಾಜರಿದ್ದರು.
ಸಂಘದ ಸ್ಥಾಪನೆ, ಅದರ ಗುರಿ ಹಾಗೂ ಶತಮಾನ ಪ್ರಯಾಣವನ್ನು ನಾಯಕರು ಸ್ಮರಿಸಿದರು. ಸಾಮಾಜಿಕ ಸಾಮರಸ್ಯ, ಕುಟುಂಬ ಮೌಲ್ಯಗಳ ಜಾಗೃತಿ, ಪರಿಸರ ಸ್ನೇಹಿ ಜೀವನ, ಸ್ವದೇಶಿ ಉತ್ಪನ್ನಗಳ ಬಳಕೆ ಮತ್ತು ದೈನಂದಿನ ನಾಗರಿಕ ಕರ್ತವ್ಯ ಪಾಲನೆ ಹೀಗೆ ಸಮಾಜ ಮತ್ತು ಸ್ವಯಂಸೇವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಐದು ರೂಪಾಂತರಗಳನ್ನು ಪ್ರಸ್ತಾಪಿಸಿದರು.
ಈ ವಿಜಯದಶಮಿ ಆಚರಣೆಯೊಂದಿಗೆ ಆರ್‌ಎಸ್‌ಎಸ್ ಶತಮಾನೋತ್ಸವ ವರ್ಷಕ್ಕೆ ಅಧಿಕೃತ ಚಾಲನೆ ದೊರೆಯಿತು. ಮನೆ-ಮನೆ ಸಂಪರ್ಕದಿಂದ ಹಿಡಿದು ಭವ್ಯ ಹಿಂದೂ ಸಮ್ಮೇಳನವರೆಗಿನ ಅನೇಕ ಕಾರ್ಯಕ್ರಮಗಳನ್ನು ಸಂಘವು ಮುಂದಿನ ವರ್ಷವೆಲ್ಲ ಆಯೋಜಿಸಲಿದೆ.