ಬೆಂಗಳೂರು: ಕೋಲ್ಕತ್ತಾದ ಆರ್ ಜಿ ಕರ್ ಕಾಲೇಜು ಮತ್ತು ವೈದ್ಯಕೀಯ ಆಸ್ಪತ್ರೆಯಲ್ಲಿ ತರಬೇತಿ ನಿರತ ಮಹಿಳಾ ವೈದ್ಯೆಯ ಮೇಲೆ ನಡೆದ ಘೋರ ಅತ್ಯಾಚಾರ ಹಾಗೂ ಕೊಲೆಯನ್ನು ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಖಂಡಿಸಿದೆ. ಇಡೀ ದೇಶವನ್ನೇ ಬೆಚ್ಚಿ ಬೆಳೆಸುವ ಈ ಘಟನೆ ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸುವಂತೆ ಮಾಡಿದೆ ಎಂದು ಸಂಘ ಹೇಳಿದೆ.
ನಮ್ಮ ಸಮಾಜವು ಇಂದು ಅತ್ಯಂತ ತೀವ್ರ ಸಾಂಸ್ಕೃತಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಯಾವುದೇ ವಯಸ್ಸಿನ ಮಿತಿ ಇಲ್ಲದೆ ಮಹಿಳೆಯರ ಮೇಲೆ ಅಪರಾಧಗಳು ಅವ್ಯಾಹತವಾಗಿ ನಡೆಯುತ್ತಿದೆ. ಕಳೆದ ತಿಂಗಳು ಆಂಧ್ರಪ್ರದೇಶದಲ್ಲಿ, 12-13 ವರ್ಷದ ಮೂವರು ಶಾಲಾ ಮಕ್ಕಳು 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಅವಳನ್ನು ಕೊಂದರು. ಮುಂಬೈನಲ್ಲಿ ಕೂಡ ಇದೇ ವಯಸ್ಸಿನ ಬಾಲಕಿಯ ಮೇಲೆ ಬಾಲಕನೊಬ್ಬ ಅತ್ಯಾಚಾರವೆಸಗಿದ್ದಾನೆ. ಕಲ್ಕತ್ತಾದ ವೈದ್ಯಕೀಯ ಕಾಲೇಜೊಂದರಲ್ಲಿ ಪಾತಕಿಗಳ ಅಮಾನುಷ ಕೃತ್ಯಕ್ಕೆ ಬಲಿಯಾಗಿ ಘೋರ ಸಾವಿಗೀಡಾದ ವೈದ್ಯೆ ಈ ಪ್ರಕರಣಗಳಿಗೆ ಇನ್ನೊಂದು ಸೇರ್ಪಡೆಯಾಗಿದೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಸಮಿತಿ ಅಧ್ಯಕ್ಷರಾದ ಕೆ ಸೋಮಶೇಖರ್ ಯಾದಗಿರಿ, ರಜ್ಯ ಕಾರ್ಯದರ್ಶಿ ಡಿ ನಾಗಲಕ್ಷ್ಮಿ ಅವರು ಮಾಧ್ಯಮ ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ನಾಗರೀಕ ಸಮಾಜವು ತಲೆತಗ್ಗಿಸುವಂತೆ ಮಾಡಿರುವ ಈ ಅತ್ಯಾಚಾರದ ಮಾರಿಯು ತೀವ್ರವಾಗಿ ಎಲ್ಲೆಡೆ ಹಬ್ಬುತ್ತಿದೆ. ಈ ಮಾರಿಯ ಮೂಲ ಅಡಗಿರುವುದು ಇಂದಿನ ಸಾಂಸ್ಕೃತಿಕ ಅಧಃಪತನದಲ್ಲಿ. ಕೊಲ್ಕತ್ತಾದ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ಈಗಾಗಲೇ ಜನರು ಬೀದಿಗಿಳಿದಿದ್ದಾರೆ. ಈ ಘಟನೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ದಿಕ್ಕು ತಪ್ಪಿಸುವ ಹೀನ ಪ್ರಯತ್ನವನ್ನು ಆಡಳಿತಾರೂಢ ಟಿಎಂಸಿ ಸೇರಿದಂತೆ ಪಟ್ಟಭದ್ರರು ನಡೆಸುತ್ತಿದ್ದಾರೆ. ಆದರೆ ಸರಿಯಾದ ದಾರಿಯಲ್ಲಿ ಮುನ್ನಡೆದು ಸಂಘಟಿತ ಹೋರಾಟವನ್ನು ಬೆಳೆಸುವುದರಿಂದ ಮಾತ್ರ ಪರಿಹಾರ ಸಾಧ್ಯ ಎಂದವರು ಪ್ರತಿಪಾದಿಸಿದ್ದಾರೆ.
ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿರುವ ಅಶ್ಲೀಲ ಸಿನಿಮಾ, ಸಾಹಿತ್ಯ ಮತ್ತು ಪೋರ್ನ್ ವೆಬ್‌ಸೈಟ್‌ಗಳು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವಿ ಸಾಂಸ್ಕೃತಿಕ ಅಧಃಪತನಕ್ಕೆ ಕಾರಣವಾಗಿವೆ. ಸಾಂಸ್ಕೃತಿಕ ಅಧಃಪತನದ ಮಹಾಮಾರಿಯ ವಿರುದ್ಧ ಸಮರ ಸಾರಿ ನೇತಾಜಿ-ಭಗತ್ ಸಿಂಗರಂತಹ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳು ಹಾಗೂ ನವೋದಯದ ಹರಿಕಾರರ ಉನ್ನತ ಚಿಂತನೆಗಳನ್ನು ಎಲ್ಲೆಡೆ ಸಾರುವ ಐತಿಹಾಸಿಕ ಜವಾಬ್ದಾರಿಯು ಎಲ್ಲಾ ಪ್ರಜ್ಞಾವಂತರ ಮೇಲಿದೆ ಎಂದಿರುವ ಈ ನಾಯಕರು, ಮಹಿಳೆಯರ ಮೇಲಿನ ದೌರ್ಜನ್ಯಗಳು ನಿಲ್ಲಲಿ ಎಂದು ದೇಶದಾದ್ಯಂತ ಭುಗಿಲೇಳುತ್ತಿರುವ ಹೋರಾಟಗಳ ಜೊತೆ ನಾವು ಸಹ ಜೊತೆಗಿದ್ದೇವೆ ಎಂದಿದ್ದಾರೆ.
ಘೋರ ಘಟನೆಯ ವಿಷಯಗಳಿಗೆ ಸಂಬಂಧಿಸಿ ಸೂಕ್ತ ತನಿಖೆ ನಡೆಸಿ ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆ ವಿಧಿಸಬೇಕೆಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ರಿ) ಆಗ್ರಹಿಸುತ್ತದೆ ಎಂದವರು ಹೇಳಿದ್ದಾರೆ.