ರಾಮನಗರ: ಕೆಂಗಲ್ ಅವರನ್ನು ಸಿಎಂ ಮಾಡಿದ್ರಿ, ದೇವೇಗೌಡರನ್ನೂ ಸಿಎಂ ಹಾಗೂ ಪ್ರಧಾನಿಯನ್ನಾಗಿ ಮಾಡಿದ್ರಿ. ಕುಮಾರಸ್ವಾಮಿಯವರೂ ರಾಮನಗರ ಜಿಲ್ಲೆಯಿಂದಲೇ ಆಯ್ಕೆಯಾಗಿ ಮುಖ್ಯಮಂತ್ರಿಯಾದರು. ಇದೀಗ ನನಗೂ ಒಂದು ಅವಕಾಶ ಕೊಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮ ತವರು ಜಿಲ್ಲೆಯ ಜನರಲ್ಲಿ ಮನವಿ ಮಾಡಿದ್ದಾರೆ.
ರಾಮನಗರದಲ್ಲಿ ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಾನು ಈ ಜಿಲ್ಲೆಯ ರೈತನ ಮಗ. ನಿಮ್ಮ ಮುಂದೆ ದೊಡ್ಡ ಮಾತಾಡಲು ನಿಂತಿಲ್ಲ. ಕೆಂಗಲ್ ಹನುಮಂತಯ್ಯನವರು ಅನೇಕ ಸಾಕ್ಷಿಗುಡ್ಡೆ ಬಿಟ್ಟು ಹೋಗಿದ್ದಾರೆ. ನಮ್ಮ ಜಿಲ್ಲೆಯಿಂದ ಹನುಮಂತಯ್ಯ ಅವರ ನಂತರ ರಾಮಕೃಷ್ಣ ಹೆಗಡೆ ಅವರು ಗೆದ್ದು ಮುಖ್ಯಮಂತ್ರಿ ಆಗಿದ್ದಾರೆ. ನಂತರ ಈ ಪವಿತ್ರವಾದ ಭೂಮಿಯಲ್ಲಿ ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದಿರಿ. ನಂತರ ದೇವೇಗೌಡರಿಗೆ ಕಾಂಗ್ರೆಸ್ ಬೆಂಬಲ ನೀಡಿ ಪ್ರಧಾನಮಂತ್ರಿ ಮಾಡಿತು. ನಂತರ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದೀವಿ. ಕುಮಾರಸ್ವಾಮಿ ಅವರು ಒಮ್ಮೆ ಬಿಜೆಪಿ ಜತೆ ಸೇರಿ ಮತ್ತೊಮ್ಮೆ ಕಾಂಗ್ರೆಸ್ ಬೆಂಬಲದಿಂದ ಮುಖ್ಯಮಂತ್ರಿ ಆಗಿದ್ದಾರೆ. ಈಗ ರಾಜ್ಯದ ಜನರ ಸೇವೆ ಮಾಡಲು ನನಗೆ ಒಂದು ಅವಕಾಶ ಮಾಡಿಕೊಡಿ ಎಂದು ಕೇಳಿಕೊಳ್ಳಲು ನಿಮ್ಮ ಮುಂದೆ ಬಂದಿದ್ದೇನೆ ಎಂದರು.
ರಾಮನಗರ ಇಂದು ಜನಸಾಗರವಾಗಿ ಪರಿವರ್ತನೆಗೊಂಡಿದೆ. ಒಳ್ಳೆಯ ನಾಳೆಗಳಷ್ಟೇ ಅವರ ಆಶಯ, ಭರವಸೆ, ನಿರೀಕ್ಷೆ. ಅವರ ಕನಸು ಕೈಗೂಡುವ ದಿನಗಳು ಹತ್ತಿರದಲ್ಲೇ ಇವೆ ಎಂದು ಭರವಸೆ ನೀಡಿದೆ. #KarnatakaWantsCongress pic.twitter.com/cUzBIuiORn
— DK Shivakumar (@DKShivakumar) May 8, 2023
ಈ ಜಿಲ್ಲೆಯಲ್ಲಿ ದೇವೇಗೌಡರನ್ನು ಬೆಳೆಸಿದ್ದೀರಿ, ಕುಮಾರಸ್ವಾಮಿ ಅವರನ್ನೂ ಬೆಳೆಸಿದ್ದೀರಿ, ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಬೆಳೆಸಿದ್ದೀರಿ. ನಾನು ನಿಮ್ಮ ಮನೆ ಮಗ. ನನ್ನನ್ನು ಈ ಜಿಲ್ಲೆಯ ಉದ್ದಗಲದಲ್ಲಿ ಬೆಳೆಸಿದ್ದೀರಿ, ನನ್ನ ತಮ್ಮನನ್ನು ಲೋಕಸಭೆಗೆ ಕಳಿಸಿಕೊಟ್ಟಿದ್ದೀರಿ. ಈ ಬಾರಿ ನನಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡುತ್ತೇನೆ ಎಂದವರು ಹೇಳಿದರು
ಕ್ಷೇತ್ರದ ಎಲ್ಲಾ ಕಾರ್ಯಕರ್ತರು ಇಲ್ಲಿ ನನಗೆ ಸ್ಪರ್ಧಿಸುವಂತೆ ಹೇಳಿದರು. ನಂತರ ಹೈಕಮಾಂಡ್ ಅವರು ನಿಖಿಲ್ ವಿರುದ್ಧ ಸುರೇಶ್ ಅವರನ್ನು ಸ್ಪರ್ಧಿಸುವಂತೆ ತಿಳಿಸಿದರು. ಆದರೆ ನಾವು ಕಳೆದ ಬಾರಿ ಕುಮಾರಸ್ವಾಮಿಗೆ ಬೆಂಬಲ ನೀಡಿ, ಅನಿತಾ ಕುಮಾರಸ್ವಾಮಿ ಅವರನ್ನು ಬೆಂಬಲ ನೀಡಿದ್ದೇವೆ. ಈ ಸಮಯದಲ್ಲಿ ನಮ್ಮ ಕಾರ್ಯಕರ್ತ, ಕೋವಿಡ್ ಸಮಯವನ್ನು ಲೆಕ್ಕಿಸದೇ ನಿಮಗಾಗಿ ಹಗಲುರಾತ್ರಿ ಸೇವಕನಾಗಿ ಕೆಲಸ ಮಾಡಿರುವ ಇಕ್ಬಾಲ್ ಹುಸೇನ್ ಅವರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಇಲ್ಲಿ ಜಾತಿ ಧರ್ಮಕ್ಕಿಂತ ಕಾರ್ಯಕರ್ತ ಹಾಗೂ ಆತನ ಸೇವೆ ಮುಖ್ಯ ಎಂದು ಅವರಿಗೆಬೆಂಬಲ ನೀಡಿ ಎಂದು ಡಿಕೆಶಿ ಕೋರಿದರು.
ಇಕ್ಬಾಲ್ ಹುಸೇನ್ ನಾಯಕ ಅಲ್ಲ, ಕಾರ್ಯಕರ್ತ ಎಂದು ಹೇಳುತ್ತೇನೆ. ದಿನಬೆಳಗಾದರೆ ಅವರು ನಿಮಗೆ ಸಿಗುತ್ತಾರೆ, ಕೆಲಸ ಮತ್ತು ಸೇವೆ ಮಾಡುತ್ತಾರೆ. ಇಲ್ಲಿ ಇಕ್ಬಾಲ್ ಹುಸೇನ್ ನೆಪಕ್ಕೆ ಮಾತ್ರ ಅಭ್ಯರ್ಥಿ. ಇಲ್ಲಿ ಸ್ಪರ್ಧಿಸುತ್ತಿರುವುದು ಡಿ.ಕೆ. ಶಿವಕುಮಾರ್. ನನ್ನ ರಾಜಕಾರಣದ ಅವಧಿಯಲ್ಲಿ ಅನೇಕ ಸಚಿವಾಲಯ ನಿಭಾಯಿಸಿದ್ದೇನೆ. ಈ ಅವಧಿಯಲ್ಲಿ ಈ ಭಾಗದ ಪ್ರತಿಯೊಬ್ಬ ರೈತನಿಗೆ ಒಂದೂವರೆ ಲಕ್ಷ ವೆಚ್ಚದಲ್ಲಿ ಉಚಿತ ಟ್ರಾನ್ಸ್ ಫಾರಂ ಉಚಿತವಾಗಿ ಅಳವಡಿಸಿದ್ದೇವೆ. ರೈತನಿಗೆ ಯಾವುದೇ ಸರ್ಕಾರಿ ಉದ್ಯೋಗದ ಸೌಲಭ್ಯಗಳಿಲ್ಲ. ಹೀಗಾಗಿ ಸಂಕಷ್ಟದಲ್ಲಿರುವ ರೈತನನ್ನು ನಾವು ಬದುಕಿಸಬೇಕು. ಗೊಬ್ಬರ ಬೆಲೆ ಹೆಚ್ಚಾಗಿದೆ, ಬೆಂಬಲ ಬೆಲೆ ಸಿಗುತ್ತಿಲ್ಲ ಇದರ ಬಗ್ಗೆ ಯಾರಾದರೂ ಧ್ವನಿ ಎತ್ತಿದ್ದಾರಾ? ಹೋರಾಟ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.
ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಶಿವಲಿಂಗೇಗೌಡ, ವಾಸು, ಶ್ರೀನಿವಾಸ ಗೌಡರು, ಮಧುಬಂಗಾರಪ್ಪ ಸೇರಿದಂತೆ ಎಲ್ಲರೂ ಕಾಂಗ್ರೆಸ್ ಸೇರಿದ್ದಾರೆ. ಬಿಜೆಪಿ ಕೂಡ ಅಧಿಕಾರಕ್ಕೆ ಬರುವುದಿಲ್ಲ, ಜಗದೀಶ್ ಶೆಟ್ಟರ್, ಸವದಿ, ಪುಟ್ಟಣ್ಣ ಅವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಇವರೆಲ್ಲಾ ದಡ್ಡರಾ? ನನ್ನ ವಿರುದ್ಧ ಸ್ಪರ್ಧಿಸಿದ್ದ ಪಿಜಿಆರ್ ಸಿಂಧ್ಯಾ, ಮಂಜುನಾಥ್ ನಾರಾಯಣ ಗೌಡರು ಜೆಡಿಎಸ್ ತೊರೆದು ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿ ಕೂರಿಸಲು ಕಾಂಗ್ರೆಸ್ ಸೇರಿದ್ದಾರೆ ಎಂದವರು ಹೇಳಿದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮೇಕೆದಾಟು ಯೋಜನೆ ಜಾರಿಗೆ ಹೋರಾಟ ಮಾಡಿದದೆವು. ನೀವೆಲ್ಲರೂ ಬೆಂಬಲ ನೀಡಿದ್ದು, ನಿಮಗೆ ಕೋಟಿ ನಮನಗಳು. ಬಿಜೆಪಿ ನನ್ನ ಮೇಲೆ ಸುಳ್ಳು ಕೇಸು ಹಾಕಿದರು. ಗುಜರಾತ್ ರಾಜ್ಯಸಭಾ ಚಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಇಟ್ಟುಕೊಂಡಿದ್ದಕ್ಕೆ ನನ್ನ ಮೇಲೆ ದಾಳಿ ಮಾಡಿಸಿ ನನ್ನ ಮೇಲೆ ಸುಳ್ಳು ಕೇಸು ದಾಖಲಿಸಿದರು. ಈ ಸಮಯದಲ್ಲಿ ನೀವೆಲ್ಲರೂ ದೇವಾಲಯ, ಚರ್ಚೆ ಮಸೀದಿಯಲ್ಲಿ ಪ್ರಾರ್ಥಿಸಿ ನನ್ನನ್ನು ಹೊರಗೆ ಕರೆದುಕೊಂಡು ಬಂದಿದ್ದೀರ. ಹೀಗಾಗಿ ನಿಮಗೆ ಕೋಟಿ ಕೋಟಿ ನಮನಗಳು ಎಂದು ಡಿಕೆಶಿ ಹೇಳಿದರು.