ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಬೇಡಿಕೆ ಈಡೇರಿಕೆ ಸಂಬಂಧ ಸೂಕ್ತ ಕ್ರಮಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಗುರುವಾರ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಮಿಕ ಸಂಘಟನೆಗಳ ಮುಖಂಡರ ಸಭೆ ಗಮನಸೆಳೆಯಿತು.
ಕೆಲ ಸಮಯದ ಹಿಂದೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹೋರಾಟಕ್ಕೆ ಮುಂದಾಗಿದ್ದ ಸಾರಿಗೆ ಸಂಸ್ಥೆ ನೌಕರರನ್ನು ಸಮಾಧಾನಪಡಿಸುವಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಯಶಸ್ವಿಯಾಗಿದ್ದರು. ಇದೀಗ ಮತ್ತೆ ಹೋರಾಟ ಸಾಧ್ಯತೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸಾರಿಗೆ ಸಚಿವರು KSRTC ಅಧ್ಯಕ್ಷ ಎಸ್ ಆರ್ ಶ್ರೀನಿವಾಸ್ (ವಾಸು) ಉಪಸ್ಥಿತಿಯಲ್ಲಿ, ನಿಗಮದ 11 ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ಕುಂದು ಕೊರತೆಗಳ ಸಭೆ ನಡೆಸಿದರು.
ಎಲ್ಲಾ ಸಂಘಟನೆಗಳ ಪ್ರಮುಖರು ತಮ್ಮ ಬೇಡಿಕೆಗಳನ್ನು ಮತ್ತು ಅಭಿಪ್ರಾಯಗಳನ್ನು ಮಂಡಿಸಿದರು. ಮುಖ್ಯವಾಗಿ 01.01.2020 ರಿಂದ 28.02.2023 ರವರೆಗಿನ ವೇತನ ಬಾಕಿ ಹಣ, 01.01.2024 ರಿಂದ ಮೂಲ ವೇತನ ಹೆಚ್ಚಳ ಹಾಗೂ 01.01.2020 ರಿಂದ 28.02.2023ರ ವರೆಗಿನ ವೇತನ ಹೆಚ್ಚಳದ ಬಾಕಿಯನ್ನು ನಿವೃತ್ತ ಹಾಗೂ ಇತರೆ ಕಾರಣಗಳಿಂದ ಸಂಸ್ಥೆಗಳಿಂದ ಹೊರ ಹೋಗಿರುವ ನೌಕರರ ಹಾಗೂ ಇತರೆ ಬೇಡಿಕೆಗಳ ಬಗ್ಗೆ ಚರ್ಚಿಸಿದರು.
ಅಂತಿಮವಾಗಿ 01.01.2020 ರಿಂದ 28.02.2023ರ ವರೆಗಿನ ನಿವೃತ್ತಿ ಹೊಂದಿರುವ ಹಾಗೂ ಸಂಸ್ಥೆಯಿಂದ ಹೊರಗೆ ಹೋಗಿರುವ ಎಲ್ಲಾ ಅಂದಾಜು 10000 ನೌಕರರಿಗೂ ಶೇ.15 ರಷ್ಟು ವೇತನ ಹೆಚ್ಚಳದ ಹಣ ಸುಮಾರು ರೂ. 220 ಕೋಟಿ ಬಾಕಿ ಹಣ ನೀಡುವುದಾಗಿ ಸಾರಿಗೆ ಸಚಿವರು ಭರವಸೆ ನೀಡಿದರು. ಅಷ್ಟೇ ಅಲ್ಲ ಈ ಸಂಬಂಧ ಕೂಡಲೇ ಆದೇಶ ಹೊರಡಿಸಲು KSRTC ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು. ಸಚಿವರ ನಡೆ ಬಗ್ಗೆ ಎಲ್ಲಾ ಸಂಘಟನೆಗಳು ಹರ್ಷ ವ್ಯಕ್ತಪಡಿಸಿ, ಸಾರಿಗೆ ಸಚಿವರನ್ನು, KSRTC ಅಧ್ಯಕ್ಷರನ್ನು ಹಾಗೂ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.
01.01.2024 ರಿಂದ ಮಾಡಬೇಕಾಗಿರುವ ವೇತನ ಹೆಚ್ಚಳದ ಬಗ್ಗೆ ಮಾತನಾಡಿದ ಸಚಿವ ರಾಮಲಿಂಗ ರೆಡ್ಡಿ, ಮುಂದಿನ ದಿನಗಳಲ್ಲಿ ಹೊಸ ಬಸ್ಸುಗಳ ಸೇರ್ಪಡೆಯಾಗಿ ಆದಾಯ ವೃದ್ಧಿಸಲಿದ್ದು, ಆರ್ಥಿಕ ಪರಿಸ್ಥಿತಿಯನ್ನು ಗಣನೆಗೆ ತೆಗದುಕೊಂಡು ಈ ಬಗ್ಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಇಂದು ಮೊದಲ ಸಭೆಯಾಗಿರುವುದರಿಂದ ಮಹತ್ವದ ಆದೇಶ ಹೊರಬಿದ್ದಿದ್ದು, ಮುಂದಿನ ಸಭೆಗಳಲ್ಲಿ ಹಲವು ಬೇಡಿಕೆಗಳ ಬಗ್ಗೆ ಸಕಾರಾತ್ಮಕವಾಗಿ ಚರ್ಚೆ ಮಾಡಿ ಮುಂದುವರಿಯೋಣ. ಇದು ನಿಮ್ಮ ಸಂಸ್ಥೆ ಈ ಸಂಸ್ಥೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ ಅದರೊಂದಿಗೆ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಒದಗಿಸಿ,ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಯ ಪಥದಲ್ಲಿ ತೆಗೆದುಕೊಂಡು ಹೋಗಲು ತಮ್ಮೆಲ್ಲರ ಸಹಕಾರ ಬೇಕು ಎಂದು ಸಾರಿಗೆ ಸಚಿವರು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ KSRTC ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್. ರಾಮಚಂದ್ರನ್, ,ವಾಕರಾಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಸ್ ಭರತ್, ಕಕರಸಾನಿಗಮ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, KSRTC ನಿರ್ದೇಶಕರು (ಭ& ಜಾ) ಡಾ. ಕೆ ನಂದಿನಿದೇವಿ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.