ಬೆಂಗಳೂರು: ಪ್ರೋತ್ಸಾಹ ಧನಕ್ಕಾಗಿ ಸುದೀರ್ಘ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು ಇದೀಗ ಮತ್ತೆ ರಣಕಹಳೆ ಮೊಳಗಿಸಿದ್ದಾರೆ.
ಕಳೆದ 8 ವರ್ಷಗಳಿಂದ ದುಡಿದಷ್ಟು ಪ್ರೋತ್ಸಾಹ ಧನ ಸಿಗದೇ ಆಗುತ್ತಿರುವ ವಂಚನೆ ತಡೆಗಟ್ಟಲು ಆಶಾ ಪೇಮೆಂಟ್ ಪ್ರಕ್ರಿಯೆಯಿಂದ RCH ಪೋರ್ಟಲ್ ಅನ್ನು ಡೀಲಿಂಕ್ ಮಾಡಿ ಎಂದು ಕರೆ ಕೊಟ್ಟಿರುವ AIUTUC ನೇತೃತ್ವದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಫೆಬ್ರವರಿ 13,14 ರಂದು ಬೃಹತ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಕನಿಷ್ಟ ರೂ.15,000 ಪ್ರೋತ್ಸಾಹ ವೇತನ ನೀಡಬೇಕು ಎಂದು ಆಗ್ರಹಿಸಿ ಹೋರಾಟ ನಡೆಸಲು ನಿರ್ಧರಿಸಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಆಶಾ ಕಾರ್ಯಕರ್ತೆಯರ ರಾಜ್ಯ ಮಟ್ಟದ ಹೋರಾಟಕ್ಕೆ ಕರೆ ನೀಡಿದೆ. ವಿಧಾನಸೌಧ ಚಲೋ ಜೊತೆಗೆ ಬೆಂಗಳೂರು ಫ್ರೀಡಂ ಪಾರ್ಕ್’ನಲ್ಲಿ ಪ್ರತಿಭಟನಾ ಪ್ರದರ್ಶನ ಮಾಡಲಾಗುವುದು, ಹಲವು ವರ್ಷಗಳಿಂದ ಭಾಗಶಃ ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹಧನ ಬಿಡುಗಡೆಗೆ ಒತ್ತಾಯಿಸಲಾಗುವುದು, ಸುದೀರ್ಘ ಕಾಲದಿಂದ ಮುಂದಿಡಲಾಗುತ್ತಿರುವ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದು AIUTUC ಪ್ರಮುಖರು ತಿಳಿಸಿದ್ದಾರೆ.