ಕಾರವಾರ : ಉತ್ತರಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಗೆ ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ಭೇಟಿ ನೀಡಿದರು. ನೌಕಾಪಡೆಯ ಮುಖ್ಯಸ್ಥ, ಅಡ್ಮಿರಲ್ ಕರಂಬೀರ್ ಸಿಂಗ್‌ರೊಂದಿಗೆ ಗೋವಾದಿಂದ ಹೆಲಿಕಾಪ್ಟರ್ ಮೂಲಕ ಐಎನ್ಎಸ್ ಕದಂಬ ನೌಕಾನೆಲೆಯ ಹೆಲಿಪ್ಯಾಡ್‌ಗೆ ಆಗಮಿಸಿದ ವೇಳೆ ಕದಂಬ ನೌಕಾನೆಲೆಯ ಎರಡನೇಯ ಹಂತದ ವಿಸ್ತರಣಾ ಕಾಮಗಾರಿಗಳ ವೈಮಾನಿಕ ಸಮೀಕ್ಷೆಯನ್ನು ನಡೆಸಿದರು.
ನೌಕಾನೆಲೆಗೆ ಆಗಮಿಸಿದ ರಕ್ಷಣಾ ಸಚಿವರನ್ನ ವೆಸ್ಟರ್ನ್ ನೇವಲ್ ಕಮಾಂಡ್, ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್, ವೈಸ್ ಅಡ್ಮಿರಲ್ ಆರ್.ಹರಿ ಕುಮಾರ ಮತ್ತು ಕರ್ನಾಟಕ ನೌಕಾ ಪ್ರದೇಶದ ಧ್ವಜ ಅಧಿಕಾರಿ, ರಿಯರ್ ಅಡ್ಮಿರಲ್ ಮಹೇಶ ಸಿಂಗ್ ಸ್ವಾಗತಿಸಿದರು.
ಬಳಿಕ ನೌಕಾಪ್ರದೇಶದ ಸರ್ವೇಕ್ಷಣೆ ನಡೆಸಿದ ಸಚಿವ ರಾಜನಾಥ ಸಿಂಗ್ ರಿಗೆ ಅಧಿಕಾರಿಗಳು ಎರಡನೇಯ ಹಂತದ ಕಾಮಗಾರಿ ಕುರಿತು ಮಾಹಿತಿ ನೀಡಿದರು. ಇದೇ ವೇಳೆ ಹಡಗುಗಳ ರಿಪೇರಿ ಕಾರ್ಯ ಕೈಗೊಳ್ಳುವ ಲಿಫ್ಟಿಂಗ್ ಯಂತ್ರಗಳ ಸಾಮರ್ಥ್ಯವನ್ನು ಪ್ರದರ್ಶಿಸಲಾಯಿತು.ಜೊತೆಗೆ ನೌಕಾ ಜಟ್ಟಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದರು.
ನೌಕಾನೆಲೆ ಸಿಬ್ಬಂದಿಗಾಗಿ ನೂತನವಾಗಿ ನಿರ್ಮಿಸಲಾದ ವಸತಿಗೃಹಕ್ಕೆ ಸಚಿವ ರಾಜನಾಥ ಸಿಂಗ್ ಭೇಟಿ ನೀಡಿದ್ದು ಅಲ್ಲಿನ ಮೂಲಭೂತ ಸೌಕರ್ಯಗಳು, ಇಂಧನ ದಕ್ಷತೆ, ತ್ಯಾಜ್ಯ ನಿರ್ವಹಣೆ ಹಾಗೂ ಪರಿಸರ ಸ್ನೇಹಿ ವ್ಯವಸ್ಥೆಗಳನ್ನು ವೀಕ್ಷಿಸಿದರು. ಈ ವೇಳೆ ನೌಕಾನೆಲೆಯ ಎರಡನೇಯ ಹಂತದ ಕಾಮಗಾರಿಯ ಕಾಂಟ್ರ್ಯಾಕ್ಟರ್, ಎಂಜಿನಿಯರ್, ಅಧಿಕಾರಿಗಳು ಹಾಗೂ ನೌಕಾನೆಲೆ ಸಿಬ್ಬಂದಿಯೊಂದಿಗೂ ರಾಜನಾಥ ಸಿಂಗ್ ಮಾತುಕತೆ ನಡೆಸಿದರು.