ಬೆಂಗಳೂರು: ಸಕ್ಜರೆ ನಾಡು ಮಂಡ್ಯಾದ ಕಲಾವಿದರೊಬ್ಬರು ಸದ್ದಿಲ್ಲದೆ ಸುದ್ದಿಯಾಗಿದ್ದಾರೆ. ಕಲಾಸರಸ್ವತಿಯ ಆರಾಧನೆಯಲ್ಲೇ ಕಾಯಕ ನಡೆಸುತ್ತಿರುವ ಈ ಕಲಾವಿದ ವರನಟ ಡಾ.ರಾಜ್ ಅವರ ಅಪ್ಪಟ ಅಬಿಮಾನಿ. ಅವರ ಹೆಸರನ್ನೇ ತನ್ನ ಕಾಯಕದ ಉಸಿರೆಂಬಂತೆ ಚಿತ್ರಕಲೆ ಬಿಡಿಸಿ ನಾಡಿನ ಗಮನಸೆಳೆದಿದ್ದಾರೆ. ವರನಟ ಅಭಿನಯಿಸಿರುವ ಚಿತ್ರಗಳ ಹೆಸರುಗಳನ್ನು ಬರೆದು, ವೃಕ್ಷದ ರೀತಿಯಲ್ಲಿ ಚಿತ್ರಿಸಿರುವ ‘ರಾಜ್ ಕನ್ನಡ ವೃಕ್ಷ’ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ.
ಅಂದ ಹಾಗೆ ಈ ಕಲಾವಿದರ ಹೆಸರು ನರಸಿಂಹಾಚಾರಿ. ಮಂಡ್ಯ ಸಮೀಪದ ಸಂತೆಕಸಲಗೆರೆಯ ಸರ್ಕಾರಿ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿರುವ ಇವರು, ವರನಟ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ. ರಾಜ್ ಸ್ನರಣೆಯೇ ಇವರ ಉಸಿರಂತೆ. ಸಮಯ ಸಿಕ್ಕಿದಾಗಲೆಲ್ಲಾ ರಾಜ್‌ಕುಮಾರ್ ಚಿತ್ರಗಳನ್ನು ಬಿಡಿಸುತ್ತಾ ಸಾವಿರಾರು ಕೃತಿಗಳನ್ನು ರಚಿಸಿರುವ ನರಸಿಂಹಚಾರಿ ಅವರು ಇದೀಗ ಲಾಕ್‌ಡೌನ್ ಸಮಯದಲ್ಲಿ ‘ರಾಜ್ ವೃಕ್ಷ’ ಚಿತ್ರ ರಚಿಸಿ ಎಲ್ಲರ ಚಿತ್ತ ಸೆಳೆದಿದ್ದಾರೆ.
ಈ ‘ರಾಜ್ ವೃಕ್ಷ’ದ ವಿಶೇಷ ಏನೆಂದರೆ, ಕನ್ನಡಾಂಬೆಯೇ ಈ ವೃಕ್ಷಕ್ಕೆ ಶಕ್ತಿ, ವರನಟ ಅಭಿನಯದ ಸಿನಿಮಾಗಳ ಹೆಸರುಗಳುಳ್ಳ ಅಕ್ಷರಗಳೇ ವೃಕ್ಷದ ಎಲೆಗಳು. ಬೇಡರ ಕಣ್ಣಪ್ಪ, ರಾಯರ ಸೊಸೆ, ಕೃಷ್ಣಗಾರುಡಿ, ಅಣ್ಣತಂಗಿ, ಭಕ್ತಕನಕದಾಸ.. ಹೀಗೆ ಆರಂಭದಿಂದ ಕೊನೆಯ ಚಿತ್ರ ಶಬ್ಧವೇದಿವರೆಗಿನ ರಾಜ್ ಅಭಿನಯದ 205 ಚಿತ್ರಗಳ ಹೆಸರುಗಳನ್ನು ಈ ವೃಕ್ಷದಲ್ಲಿ ಚಿಗುರಿಸಿದ್ದಾರೆ.
ಕಳೆದ ವರ್ಷ ಲಾಕ್‌ಡೌನ್ ವೇಳೆ ರಾಜ್ ಅಭಿನಯದ ಚಿತ್ರಗಳ ಪೋಸ್ಟರ್‌ಗಳನ್ನು ಬಿಡಿಸಿ ಇವರು ಗಮನಸೆಳೆದಿದ್ದರು. ಲಾಕ್‌ಡೌನ್‌ನ 7 ತಿಂಗಳ ಅವಧಿಯಲ್ಲಿ ರಾಜ್ ಅವರ ಎಲ್ಲಾ ಚಿತ್ರಗಳ ಪೋಸ್ಟರ್‌ಗಳನ್ನು ರಚಿಸಿ ಕನ್ಬಡ ಸಿನಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ರಾಜ್ ಅಭಿನಯದ ಎಲ್ಲಾ ಚಿತ್ರಗಳನ್ನು ವೀಕ್ಷಿಸಿರು ನರಸಿಂಹಚಾರಿ ಆ ಎಲ್ಲಾ ಚಿತ್ರಗಳ ಹೆಸರು ಉಲ್ಲೇಖಿಸಿ ರಚಿಸಿರುವ ‘ರಾಜ್ ವೃಕ್ಷ’ ಇದೀಗ ಕನ್ನಡ ಸಿನಿ ಲೋಕ ಹಾಗೂ ಸಾರಸ್ವತ ಕ್ಷೇತ್ರದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಕತ್ತಾಗಿ ವೈರಲ್ ಆಗುತ್ತಿದ್ದು ಭಾರೀ ಮೆಚ್ಚುಗೆ ಗಳಿಸುತ್ತಿದೆ.