ಬೆಂಗಳೂರು: ರೈತರಿಗೆ ಮನೋಸ್ಥೈರ್ಯ ತುಂಬಲು ಹಾಗೂ ಅವರಲ್ಲಿ ಕೃಷಿ ಬಗೆಗಿನ ಇನ್ನಷ್ಟು ಆಸಕ್ತಿ ಮೂಡಿಸಲು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಮತ್ತೆ “ ರೈತರೊಂದಿಗೆ ಕಾಲ ಕಳೆಯಲು ಮುಂದಾಗಿದ್ದಾರೆ. ನವೆಂಬರ್ 14 ರಂದು ಮಂಡ್ಯ ಜಿಲ್ಲೆಯಿಂದ ರೈತರೊಂದಿಗೆ ಒಂದು ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದ ಸಚಿವರು ಇದೀಗ ಮಾದರಿ ಜಿಲ್ಲೆ ಕೋಲಾರದಲ್ಲಿ ರೈತರೊಂದಿಗೆ ಕಾಲ ಕಳೆಯಲಿದ್ದಾರೆ. ಇದೇ ಜ. 6 ರಂದು ಕೋಲಾರದಲ್ಲಿ “ರೈತರೊಂದಿಗೊಂದು ದಿನ” ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಕೋಲಾರದಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಇಲ್ಲಿನ ರೈತರು ಇತರೆ ಜಿಲ್ಲೆಗಳ ರೈತರಿಗೆ ಮಾದರಿಯೂ ಆಗಿದ್ದಾರೆ. ಅಲ್ಲದೇ ಕೋಲಾರ ಜಿಲ್ಲೆಯ ಆತ್ಮಸ್ಥೈರ್ಯಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂಬ ಶಪಥವನ್ನು ಮಾಡಿದ್ದಾರೆ. ಕೋಲಾರ ಜಿಲ್ಲೆಯ ರೈತರಲ್ಲಿನ ಈ ಆಶಾಭಾವನೆ ಹಾಗೂ ಕೃಷಿಯಲ್ಲಿ ನವೀನತೆ ಸಾಧಿಸುವ ಛಲ ಎಲ್ಲಾ ರೈತರಿಗೂ ಮಾದರಿಯಾಗಬೇಕಿದ್ದು, ಇಂತಹ ಮಾದರಿ ಜಿಲ್ಲೆಯಲ್ಲಿ ಕೃಷಿ ಸಚಿವರು ತಮ್ಮ ಎರಡನೇ ರೈತರೊಂದಿಗೊಂದು ದಿನ ಕಳೆಯಲಿದ್ದಾರೆ.ಅಂದ್ಹಾಗೆ ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಹೆಚ್.ನಾಗೇಶ್ ಸಹ ಕೃಷಿ ಸಚಿವರೊಂದಿಗೆ ಜೊತೆಯಾಗಲಿದ್ದಾರೆ.
ಬೇವಳ್ಳಿ ಗ್ರಾಮದಿಂದ ಬಿ.ಸಿ.ಪಾಟೀಲ್ ತಮ್ಮ ಕೋಲಾರದ ರೈತರೊಂದಿಗಿನ ಪ್ರವಾಸ ಆರಂಭಿಸಲಿದ್ದು, ಪ್ರಗತಿ ಪರ ರೈತ ಮಹಿಳೆ “ಅಶ್ವತ್ಥಮ್ಮ” ಅವರ ಸಮಗ್ರ ಕೃಷಿ ಪದ್ಧತಿ ಅಳವಡಿಕೆಯ ತಾಕಿಗೆ ಭೇಟಿ ನೀಡಲಿದ್ದಾರೆ.
ರಾಗಿ ಕಣಕ್ಕೆ ರೈತ ದಂಪತಿಗಳಿಂದ ಪೂಜೆ, ಅಜೋಲ್ಲಾ ತೊಟ್ಟಿ ವೀಕ್ಷಣೆ, ರೇಷ್ಮೆ ಹುಳು ಸಾಕಾಣಿಕೆ ಮನೆ ವೀಕ್ಷಣೆ ಹಾಗೂ ರೇಷ್ಮೆ ಹುಳುವಿಗೆ ಸೊಪ್ಪು ಹಾಕುವುದು, ಹುಲ್ಲು ಕತ್ತರಿಸುವಿಕೆ, ಹಾಲು ಕರೆಯುವುದು, ಕಾಂಪೊಸ್ಟ್ ಪಿಟ್ ಗೆ ವೇಸ್ಟ್ ಡೀಕಂಪೋಸರ್ ಸಿಂಪಡಣೆ, ಹಸಿರೆಲೆ ಗೊಬ್ಬರ ಬೀಜ ಬಿತ್ತನೆ, ಅಂಗಾಂಶ ಕೃಷಿ ಆಲೂಗಡ್ಡೆ ನಾಟಿ, ವಡ್ಡಹಳ್ಳಿಯಲ್ಲಿ ಕೃಷಿ ವಸ್ತು ಪ್ರದರ್ಶನ ಮಳಿಗೆಗಳ ಉದ್ಘಾಟನೆ, ಕೃಷಿ ಇಲಾಖೆಯಿಂದ ರೈತ ಫಲಾನುಭವಿಗಳಿಗೆ ಯಂತ್ರೋಪಕರಣಗಳ ವಿತರಣೆ, ಪ್ರಗತಿಪರ ರೈತ ದಂಪತಿಗಳಿಗೆ ಸನ್ಮಾನ, ಕರಪತ್ರ ಬಿಡುಗಡೆ, ಜೀವಹಳ್ಳಿ ಗ್ರಾಮದಲ್ಲಿ ವೇದಿಕೆ ಕಾರ್ಯಕ್ರಮ ರೈತರೊಂದಿಗೆ ಗೂಗಲ್ ಮೀಟ್ ಮುಖಾಂತರ ಚರ್ಚೆ ಹಾಗೂ ರೈತರಿಗಾಗಿ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಕೃಷಿ ಸಚಿವರ ಕಚೇರಿ ಮೂಲಗಳು ತಿಳಿಸಿವೆ.