ಬೆಂಗಳೂರು: ಅಭಿಮಾನಿಗಳ ಒತ್ತಾಸೆಯಂತೆ ದಿ. ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ಪ್ರತಿಷ್ಠಿತ “ಕರ್ನಾಟಕ ಪ್ರಶಸ್ತಿ” ಘೋಷಣೆ ಮಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಅತೀ ಚಿಕ್ಕವಯಸ್ಸಿನಲ್ಲೇ ಅತ್ಯುತ್ತಮ ಬಾಲ
ನಟನೆಗೆ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದ ಅವರಿಗೆ ಕರ್ನಾಟಕ ಪ್ರಶಸ್ತಿ ಘೋಷಣೆ ಮಾಡುವ ಮೂಲಕ ಆಗಲಿದ ಮೇರು ನಟನೆಗೆ ಸಿ.ಎಂ ಅವರು ಅರ್ಹ ಗೌರವವನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.
ಅವರ ಬದುಕಿನ ಆದರ್ಶ ಯುವ ಜನಾಂಗಕ್ಕೆ ದಾರಿದೀಪ, ದೊಡ್ಡ ಹೆಜ್ಜೆ ಗುರುತನ್ನು ಬಿಟ್ಟು ಹೋಗಿದ್ದಾರೆ. ಪುನೀತ್ ಅವರಲ್ಲಿದ್ದ ನಯ, ವಿನಯ, ಸರಳತೆ, ಸಮಾಜ ಸೇವೆಯನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ನಾವು ಸಲ್ಲಿಸುವ ಗೌರವವಾಗಿದೆ.ಇಂದಿನ ಯುವಜನತೆ ಅವರ ಆದರ್ಶಗಳನ್ನು ಆಳವಡಿಸಿಕೊಳ್ಳುವಂತೆ ಸಲಹೆ ಮಾಡಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಬೇಕು ಎಂಬುದು ಅಭಿಮಾನಿಗಳು ಸೇರಿದಂತೆ ಆರುವರೆಕೋಟಿ ಕನ್ನಡಿಗರ ಒತ್ತಾಸೆಯಾಗಿತ್ತು. ಸೂಕ್ತ ಸಮಯದಲ್ಲಿ ಮುಖ್ಯ ಮಂತ್ರಿ ಬೊಮ್ಮಯಿ ಅವರು, ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಶ್ಲಾಘಿಸಿದ್ದಾರೆ
ಪುನೀತ್ ರಾಜ್ ಕುಮಾರ್ ಕನ್ನಡನಾಡಿನ ಜನರ ಹೃದಯ ಸಿಂಹಾಸನದಲ್ಲಿ ನೆಲೆಸಿದ್ದರು. ಅವರು ಕೇವಲ ಒಬ್ಬ ನಟನಾಗಿ ಸಮಾಜದಲ್ಲಿ ಜನಪ್ರಿಯರಾಗಿರಲಿಲ್ಲ. ನಯ, ವಿನಯ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದ ಆದರ್ಶ ವ್ಯಕ್ತಿಯಾಗಿದ್ದರು ಎಂದು ಬಣ್ಣಿಸಿದ್ದಾರೆ.
ಅವರ ಅಭಿನಯ, ಯಶಸ್ಸಿಗೆ ಅವರ ನಡೆ, ನುಡಿ, ವಿನಯ ಕಿರೀಟ ಪ್ರಾಯವಾಗಿತ್ತು. ವರನಟ
ಡಾ.ರಾಜ್ಕುಮಾರ್ ಅವರಲ್ಲಿದ್ದ ಆ ನಡೆ, ನುಡಿಯನ್ನು ಅವರಲ್ಲಿ ಕಾಣುತ್ತಿದ್ದೆವು. ಇದೆಲ್ಲದರ ನಡುವೆ ಅವರ ಪರೋಪಕಾರಿ ಕೆಲಸಗಳು ಸಮಾಜಕ್ಕೆ ಮಾದರಿಯಾಗಿದ್ದವು ಎಂದು ಅಪ್ಪುವಿನ
ಸೇವೆಯನ್ನು ಸ್ಮರಿಸಿದ್ದಾರೆ. ಆ ನಗು, ವಿನಯ, ಸರಳತೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದರಿಂದಲೇ ಅವರು ಕರ್ನಾಟಕದ ಎಲ್ಲ ಜನರ ಮನಸ್ಸು ಗೆದ್ದಿದ್ದರು.
ಕೇವಲ, ಚಿತ್ರರಂಗಕ್ಕೆ ತಮ್ಮನ್ನು ಗುರುತಿಸಿಕೊಳ್ಳದ
ಪುನೀತ್ ರಾಜ್ ಕುಮಾರ್ ಹಲವಾರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಬಡಮಕ್ಕಳ ಶಿಕ್ಷಣಕ್ಕೆ ನೆರವು, ಆನಾಥಶ್ರಮ, ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದು ಸೇರಿದಂತೆ ನೂರಾರು ಸಮಾಜ ಸೇವೆಯನ್ನು ಮಾಡಿದ್ದರು. ಅದರೆ ತಾವು ಮಾಡಿದ ಕೆಲಸಗಳಿಗೆ ಎಲ್ಲಿಯೂ ಪ್ರಚಾರ ಪಡೆಯುತ್ತಿರಲಿಲ್ಲ. ಇದು ಅವರ ದೊಡ್ಡತನಕ್ಕೆ ಸಾಕ್ಷಿ ಎಂದು ತಿಳಿಸಿದ್ದಾರೆ.