ಬೈರತ್: ಸಿರಿಯಾ ದೇಶದ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಆಡಳಿತ ಅಂತ್ಯಗೊಂಡಿದೆ. ಬಂಡುಕೋರರು ಡಮಾಸ್ಕಸ್ ಪ್ರವೇಶಿಸಿದ ಬಳಿಕ ಸಿರಿಯಾ ಅಧ್ಯಕ್ಷ ದೇಶ ತೊರೆದು ಬೇರೆಡೆಗೆ ಪಲಾಯನ ಮಾಡಿದ್ದಾರೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಅಸ್ಸಾದ್ ಅವರು ಭಾನುವಾರ ಮುಂಜಾನೆ ವಿಮಾನದ ಮೂಲಕ ನಿಗೂಢ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದ್ದು ರಷ್ಯಾ ಅಥವಾ ಟೆಹರಾನ್‌ಗೆ ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದೇ ವೇಳೆ, ಬಶರ್ ಅಲ್-ಅಸ್ಸಾದ್ ರಷ್ಯಾದ ಸರಕು ವಿಮಾನದಲ್ಲಿ ಸಿರಿಯಾವನ್ನು ತೊರೆದಿದ್ದಾರೆ ಎನ್ನಲಾಗುತ್ತಿದ್ದು, ವಿಮಾನವು ರಾಡಾರ್‌ನಿಂದ ಸಂಪರ್ಕ ಕಡಿತವಾಗಿರುವುದರಿಂದ ಒಟ್ಟಾರೆ ಬೆಳವಣಿಗೆ ಬಗ್ಗೆ ಗೊಂದಲ ಉಂಟಾಗಿದೆ ಎಂದು ಸಿರಿಯಾ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.