ಬೆಂಗಳೂರು: ನಾಡು ಕ್ರಿಸ್ಮಸ್ ಹಬ್ಬದ ತಯಾರಿಯಲ್ಲಿರುವಾಗಲೇ ಉದ್ಯಾನನಗರಿಯ ಅರಮನೆ ಮೈದಾನದಲ್ಲಿ ನಡೆದ ಕ್ರಿಸ್ಮಸ್ ಪೂರ್ವ ಅದ್ದೂರಿ ಸಂಭ್ರಮ ಗಮನಸೆಳೆಯಿತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಂಗಳವಾರ ಸಂಜೆ ನಡೆದ ಈ ವಿಶೇಷ ಕೂಟದಲ್ಲಿ ಧಾರ್ಮಿಕ ಮುಖಂಡರು, ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.
ಕ್ರಿಶ್ಚಿಯನ್ ಸೇವಾ ಸಂಘ (CSS) ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ‘ಲೀಗಲ್ ಐ’ ಬಳಗ, ಬೆಂಗಳೂರು ವಕೀಲರ ಸಂಘದ ಪ್ರಮುಖರು ಪಾಲ್ಗೊಂಡು ಗಮನಸೆಳೆದರು.
ಸಮಾರಂಭದಲ್ಲಿ ಮಾತನಾಡಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಎಸ್ ರೆಡ್ಡಿ, ಕ್ರಿಸ್ಮಸ್ ಎಂಬುದು ಹಬ್ಬ ಮಾತ್ರವಲ್ಲ, ಶಾಂತಿ ಸಹಬಾಳ್ವೆಯನ್ನು ಸಾರುವ ಸಂಭ್ರಮವಾಗಿದೆ ಎಂದರು. ಏಸು ಕ್ರಿಸ್ತನು ಜಗತ್ತಿಗೆ ಶಾಂತಿಯನ್ನು ಸಾರಿದ ಭಗವಂತ, ಹಾಗಾಗಿ ಶಾಂತಿಧೂತ ಎಂದೇ ಬಿಂಬಿತವಾಗಿದ್ದಾರೆ. ಪ್ರೀತಿಯೇ ಅವರ ಸೂತ್ರವಾಗಿದೆ. ಹಾಗಾಗಿ ಅವರು ಪ್ರೀತಿಯ ಪ್ರತೀಕವಾಗಿರುವ ಭಗವಂತ ಎನಿಸಿಕೊಂಡಿದ್ದಾರೆ ಎಂದು ಬಣ್ಣಿಸಿದ ವಕೀಲ ವಿವೇಕ್ ರೆಡ್ಡಿ, ಏಸು ಕ್ರಿಸ್ತನ ಸಂದೇಶವನ್ನು ನಾವು ನಿರಂತರ ಸಾರುತ್ತಿರಬೇಕು ಎಂದರು.
ಸಮಾಜಕ್ಕೆ ನ್ಯಾಯ ಕೊಡಿಸುವಲ್ಲಿ ವಕೀಲರ ಸಮೂಹ ನಿರಂತರ ಶ್ರಮವಹಿಸುತ್ತಿದೆ. ಅದೇ ಸಮೂಹ ಕ್ರಿಸ್ಮಸ್ ಪೂರ್ವದ ಕೂಟದಲ್ಲಿ ಭಾಗಿಯಾಗಿ ಸ್ನೇಹ-ಸಹಬಾಳ್ವೆಯ ಪರ್ವದಲ್ಲಿ ಭಾಗಿಯಾಗಿರುವುದು ಸಂತಸದ ಸಂಗತಿ ಎಂದು ವಿವೇಕ್ ರೆಡ್ಡಿ ಪ್ರತಿಪಾದಿಸಿದರು.
ಕ್ರಿಶ್ಚಿಯನ್ ಸೇವಾ ಸಂಘ (CSS) ಅಧ್ಯಕ್ಷ ಶಾಜಿ ಟಿ.ವರ್ಗೀಸ್ ಮಾತನಾಡಿ, ಮಾತನಾಡಿ ಸಾಮಾಜಿಕ ನ್ಯಾಯಕ್ಜಾಗಿ ತಮ್ಮ ಸಂಘಟನೆ ತೊಡಗಿದ್ದು, ಸಮಾಜದ ವಿವಿಧ ಸಂಘಟನೆಗಳೂ ನಮ್ಮೊಂದಿಗೆ ಕೈಜೋಡಿಸಿವೆ. ನಮ್ಮ ಸತ್ಕಾರ್ಯಗಳಿಗೆ ಬೆಂಬಲವಾಗಿ ನಿಂತಿರುವ ದಿಗ್ಗಜರಿಗೆ ಅಭಾರಿಯಾಗಿದ್ದೇವೆ ಎಂದರು.
ಸಮಾರಂಭದಲ್ಲಿ ಸಾವಿರಾರು ಮಂದಿ ಭಾಗವಹಿಸಿ ಸಂಭ್ರಮಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿದ ಸನ್ನಿವೇಶವೂ ಗಮನಸೆಳೆಯಿತು.























































