ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಉಲ್ಬಣಗೊಂಡಿದ್ದು ಕೋವಿಡ್ ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಸೈನಿಕ ಆಸ್ಪತ್ರೆಗಳನ್ನು ತಾತ್ಕಾಲಿಕವಾಗಿ ಕೋವಿಡ್ ಕೇರ್ ಕೇಂದ್ರಗಳಾಗಿ ಪರಿವರ್ತಿಸುವಂತೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ರಕ್ಷಣಾ ಇಲಾಖೆಯನ್ನು ಕೋರಿದ್ದಾರೆ.
ಈ ಸಂಬಂಧ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಪತ್ರ ಬರೆದಿರುವ ಸಚಿವ ಪ್ರಹ್ಲಾದ್ ಜೋಶಿ ಅವರು ಕರ್ನಾಟಕದ ಪರಿಸ್ಥಿತಿ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ರಾಜ್ಯದಲ್ಲಿನ ಪರಿಸ್ಥಿತಿ ಅತ್ಯಂತ ಸಂಕೀರ್ಣವಾಗಿದೆ. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆಗಳು ಭರ್ತಿಯಾಗಿದ್ದು, ಆಮ್ಲಜನಕ ವ್ಯವಸ್ಥೆಯೂ ಸಾಜಾಗುತ್ತಿಲ್ಲ. ನಿತ್ಯ 35,000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದು, ಬೆಂಗಳೂರು ನಗರವೊಂದರಲ್ಲಿಯೇ 20,000ಕ್ಕೂ ಹೆಚ್ಚು ಕೇಸ್ ಪತ್ತೆಯಾಗುತ್ತಿವೆ. 2.2 ಲಕ್ಷಕ್ಕಿಂತಲೂ ಹೆಚ್ಚು ಸಕ್ರಿಯ ಕೇಸ್‌ಗಳಿದ್ದು, ಬಹುತೇಕ ಜಿಲ್ಲೆಗಳ ಪರಿಸ್ಥಿತಿ ಕೂಡ ಗಂಭೀರವಾಗಿದೆ. ಈ ಪರಿಸ್ಥಿತಿಯಲ್ಲಿ ರಕ್ಷಣಾ ಇಲಾಖೆಯ ನೆರವಿನ ಅಗತ್ಯವಿದೆ ಎಂದು ರಾಜನಾಥ್ ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ಮನವರಿಕೆ ಮಾಡಿದ್ದಾರೆ.
ಪರಿಸ್ಥಿತಿ ನಿಭಾಯಿಸಲು ಬೆಂಗಳೂರಿನ ಕಮಾಂಡ್ ಆಸ್ಪತ್ರೆ, ಬೆಳಗಾವಿಯ ಸೇನಾ ಆಸ್ಪತ್ರೆ ಹಾಗೂ ಕಾರವಾರದ ಐಎನ್ಹೆಚ್ಎಸ್ ಆಸ್ಪತ್ರೆಯನ್ನು ಕೋವಿಡ್ ಕೇರ್ ಕೇಂದ್ರಗಳಾಗಿ ಮಾರ್ಪಡಿಸಬೇಕೆಂದು ಪ್ರಲ್ಹಾದ್ ಜೋಷಿ ಅವರು ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.