ಮಂಗಳೂರು: ಪುರಾಣ ಪ್ರಸಿದ್ದ ಪೊಳಲಿ ರಾಜರಾಜೇಶ್ವರಿ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ಕರಾವಳಿಯ ವೈಭವದ ಉತ್ಸವ. ಇದು ತಿಂಗಳ ಕಾಲದ ಸುದೀರ್ಘ ಜಾತ್ರೆ ವೈಭವ.. ದೇಶ-ವಿದೇಶಗಳಲ್ಲಿ ‘ಪೊಳಲಿ ಚೆಂಡು’ ಎಂದೇ ಇದು ಪ್ರತೀತಿ ಹೊಂದಿದೆ.
ಪ್ರತೀ ವರ್ಷ ಮಾರ್ಚ್ 14ರಿಂದ ಒಂದು ತಿಂಗಳ ಕಾಲ ಪೊಳಲಿ ಜಾತ್ರಾ ವೈಭವ ನೆರವೇರುತ್ತದೆ. ಪ್ರತೀ ಐದು ದಿನಗಳಿಗೊಮ್ಮೆ ದಂಡಮಾಲೋತ್ಸವ ಗಮನಸೆಳೆಯುತ್ತದೆ. ಅಂತಿಮ ದಿನಗಳಲ್ಲಿ ಐದು ದಿನ ಚೆಂಡಾಟ ಮಹೋತ್ಸವ ನಡೆಯುತ್ತದೆ.
ಏನಿದು ಪೊಳಲಿ ಚೆಂಡು?
ದುರ್ಗಾ ದೇವತೆಗಳ ನಾಡು ಎಂದೇ ಜನಜನಿತವಾಗಿರುವ ರಾಜ್ಯ ಕರಾವಳಿಯಲ್ಲಿ ಕಟೀಲು ದುರ್ಗಾ ಪರಮೇಶ್ವರಿ, ಸುಂಕದಕಟ್ಟೆ ಅನ್ನಪೂರ್ಣೇಶ್ವರಿ, ಕೊಲ್ಲೂರು ಮೂಕಾಂಬಿಕೆ ಹೀಗೆ ನವದುರ್ಗೆಯರ ಪೈಕಿ ಹಿರಿಯವಳೇ ಪೊಳಲಿ ರಾಜರಾಜೇಶ್ವರಿ.
ಪುರಾಣ ಕಥೆಗಳಲ್ಲಿ ಉಲ್ಲೇಖವಿರುವಂತೆ ನಾಡಿಗೆ ಕಂಟಕವಾಗಿ ಪರಿಗಣಿಸಿದ್ದ ರಾಕ್ಷಸರನ್ನು ಈ ದೇವಿ ಯುದ್ಧದಲ್ಲಿ ಸೋಲಿಸಿ, ಅವರ ರುಂಡವನ್ನು ಚೆಂಡಾಡಿದ್ದಾಳೆ ಎನ್ನಲಾಗಿದೆ. ಯುದ್ಧ ಗೆದ್ದ ಸಂದರ್ಭದಲ್ಲಿ ರಾಕ್ಷಸರ ರುಂಡ ಚೆಂಡಾಟದ ಮೂಲಕ ಶ್ರೀ ದೇವಿ ಅಪೂರ್ವ ಖುಷಿಪಟ್ಟಲೆಂಬುದೂ ಪ್ರತೀತಿ. ಪುರಾಣದ ಪ್ರಸಂಗದಂತೆ ದೇವಿಯನ್ನು ಸಂತುಷ್ಟಗೊಳಿಸಲು ಭಕ್ತ ಸಮೂಹ ಜಾತ್ರೆಯ ಅಂತಿಮ ದಿನಗಳಲ್ಲಿ ಚೆಂಡಾಟ ಮೂಲಕ ಭಕ್ತಿ-ಶಕ್ತಿಯ ಸನ್ನಿವೇಶ ಸೃಷ್ಟಿಸಲಾಗುತ್ತಿದೆ.
ಟಿಪ್ಪು ಆಡಳಿತ ಸಂದರ್ಭದ ಸನ್ನಿವೇಶ, ಅಬ್ಬಕ್ಕ ರಾಣಿಯ ಕಾಲಾವಧಿಯ ಕುರುಹುಗಳು ಈ ಚೆಂಡು ಉತ್ಸವದ ಮಹಿಮೆಯ ಒಂದು ಭಾಗವಾಗಿ ಈಗಲೂ ಸ್ಮರಣೀಯವಾಗಿದೆ. ಜಾತಿ-ಧರ್ಮ-ಸೀಮೆ ಎಂಬ ಭೇದವಿಲ್ಲದೆ ಮನುಕುಲ ಈ ಉತ್ಸವದಲ್ಲಿ ಭಾಗವಹಿಸುತ್ತದೆ.
ಈ ಹಾಡಿನ ವೀಡಿಯೋ ನೋಡಿ.. ಪುರಲ್‌ದ ಮೃಣ್ಮಯಿ ಮೂರ್ತಿ’.. ಅನನ್ಯ ಪೊಳಲಿ ಪುಣ್ಯಕ್ಷೇತ್ರ..
5 ದಿನಗಳ ‘ಚೆಂಡು’ ಉತ್ಸವ ನಂತರ ಮರುದಿನ ಬ್ರಹ್ಮರಥೋತ್ಸವ ಹಾಗೂ ಕೊನೇಯ ದಿನ, ಆರಾಟ ಮಹೋತ್ಸವ ಪೊಳಲಿ ಕ್ಷೇತ್ರದ್ದೇ ಆದ ವಿಶೇಷತೆ.