ಬೆಂಗಳೂರಿನ ರಸ್ತೆ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ಹಾಗೂ ನಗರದೆಲ್ಲೆಡೆ ಗುಂಡಿಗಳು ಬಿದ್ದಿರುವುದನ್ನು ಖಂಡಿಸಿ ಹತ್ತು ದಿನಗಳ ಬೃಹತ್ ಸಹಿ ಸಂಗ್ರಹ ಅಭಿಯಾನಕ್ಕೆ ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ ಶನಿವಾರ ಚಾಲನೆ ನೀಡಿದರು.
ತೆರೆದ ವಾಹನವನ್ನು ಬಳಸಿಕೊಂಡು ಬೆಂಗಳೂರಿನಾದ್ಯಂತ ಜನಜಾಗೃತಿಗೆ ಆಮ್ ಆದ್ಮಿ ಪಾರ್ಟಿ ಮುಂದಾಗಿದ್ದು, ಮೊದಲ ದಿನದಂದು ವಾಹನವು ಗಾಂಧಿನಗರ, ಮಲ್ಲೇಶ್ವರಂ, ರಾಜಾಜಿನಗರ, ಚಿಕ್ಕಪೇಟೆ ಮಾರ್ಗದಲ್ಲಿ ಸಾಗಿ ಆರ್ಮುಗಂ ವೃತ್ತ ತಲುಪಿತು.
ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಸಮೀಪದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಪೃಥ್ವಿ ರೆಡ್ಡಿಯವರು, “ಸರ್ಕಾರದ ಬೊಕ್ಕಸದಿಂದ ಬರೋಬ್ಬರಿ 20,000 ಕೋಟಿ ರೂಪಾಯಿಗಿಂತಲೂ ಅಧಿಕ ಹಣ ಖರ್ಚಾಗಿದ್ದರೂ ಬೆಂಗಳೂರಿನ ರಸ್ತೆಗಳ ತುಂಬಾ ಗುಂಡಿಗಳಿವೆ. ಇದರಿಂದಾಗಿ ಅಮಾಯಕ ವಾಹನ ಸವಾರರು ಕೈಕಾಲು ಮುರಿದುಕೊಂಡು ಜೀವ ಕಳೆದುಕೊಳ್ಳುತ್ತಿದ್ದಾರೆ. ಸಂಚಾರ ದಟ್ಟಣೆ ಸಮಸ್ಯೆಗೂ ಗುಂಡಿಗಳು ಕಾರಣ. ರಸ್ತೆ ಕಾಮಗಾರಿಗಳಲ್ಲಾದ ಅಕ್ರಮವನ್ನು ಹತ್ತು ದಿನಗಳ ಸಹಿ ಸಂಗ್ರಹ ಅಭಿಯಾನದ ಮೂಲಕ ಮನೆಮನೆಗೆ ತಲುಪಿಸಿ ಜಾಗೃತಿ ಮೂಡಿಸುತ್ತೇವೆ. ಸರ್ಕಾರ ಮಾಡಿರುವ ಈ ಅನ್ಯಾಯದ ವಿರುದ್ಧ ಜನತಾ ನ್ಯಾಯಾಲಯದಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ” ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿ ಮುಖಂಡರಾದ ಬಿ.ಟಿ.ನಾಗಣ್ಣ, ಸುರೇಶ್ ರಾಥೋಡ್, ಜಗದೀಶ್ ಚಂದ್ರ, ಉಷಾ ಮೋಹನ್, ಪಲ್ಲವಿ ಚಿದಂಬರಂ, ಅಶೋಕ್ ಮೃತ್ಯುಂಜಯ. ವಿಜಯ್ ಶಾಸ್ತ್ರಿಮಠ್ ಹಾಗೂ ಇನ್ನಿತರೆ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಅಭಿಯಾನದಲ್ಲಿ ಭಾಗಿಯಾಗಿದ್ದರು.