(ವರದಿ: ಕರಬಸಪ್ಪ ಕಡಗಂಚಿ)
ಗ್ರಾಮ ಪಂಚಾಯ್ತಿ ಚುನಾವಣೆ ಮುಗಿದಿದ್ದರೂ ಅಖಾಡದಲ್ಲಿನ ಜಟಾಪಟಿ ಕಡಿಮೆಯಾಗಿಲ್ಲ. ಪಂಚಾಯತ್ ಗದ್ದುಗೆಗಾಗಿ ರಾಜಕೀಯ ಪಕ್ಷಗಳ ಪ್ರಮುಖರ ಹಾಗೂ ಪ್ರಭಾವಿಗಳ ಗುದ್ದಾಟ ತಾರಕಕ್ಕೇರಿದೆ. ಅಂತಹಾ ಕಲವಳಕಾರಿ ಪ್ರಸಂಗವೊಂದು ಬೀದರ್ ಸಮೀಪದ ಚಂಡಕಾಪೂರ ಗ್ರಾಮದಲ್ಲಿ ನಡೆದಿದೆ.
ಬೀದರ್ ತಾಲೂಕಿನ ಚಂಡಕಾಪೂರ ಗ್ರಾಮ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಮತದಾನಕ್ಕಾಗಿ ಬರುತ್ತಿದ್ದ ಸದಸ್ಯರ ಮೇಲೆ ಅಧ್ಯಕ್ಷ ಆಕಾಂಕ್ಷಿಯೊಬ್ಬರ ಬೆಂಬಲಿಗರೆನ್ನಲಾದ ಗುಂಪು ಹಲ್ಲೆ ನಡೆಸಿ 7 ಮಂದಿ ಸದಸ್ಯರನ್ನು ಅಪಹರಿಸಿದೆ ಎಂಬ ಸುದ್ದಿ ಹರಿದಾಡಿದೆ. ಈ ಕುರಿತಂತೆ ಗ್ರಾಮೀಣ ಠಾಣೆಯ ಪೊಲೀಸರಿಗೆ ಮಾಹಿತಿ ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಗ್ರಾಮಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ.
ಈ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನವು ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನವು ಎಸ್ಸಿ ಮಹಿಳೆಗೆ ಮೀಸಲಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಸದಸ್ಯರ ಕಡೆಯಿಂದ ಒಬ್ಬ ಸದಸ್ಯರಿಗೆ ತಲಾ 2 ಲಕ್ಷ ರೂ. ಆಮಿಷವೊಡ್ಡಲಾಗಿತ್ತು ಎನ್ನಲಾಗಿದ್ದು, ಇದನ್ನು ನಿರಾಕರಿಸಿದ ಕಾರಣಕ್ಕಾಗಿ ಸದಸ್ಯರನ್ನು ಅಪಹರಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.
ಕೆಲ ದಿನಗಳ ಹಿಂದೆ ನೂತನ ಪಂಚಾಯತ್ ಸದಸ್ಯರ ಗುಂಪು ಕಲಬುರಗಿ ಸಮೀಪದ ತುಳಜಾಪುರ ಸುತ್ತಮುತ್ತಲ ದೇವಸ್ಥಾನಗಳಿಗೆ ಯಾತ್ರೆ ತೆರಳಿ ಶನಿವಾರ ಚಡಂಕಾಪೂರ ಗ್ರಾಮದ ಕಡೆ ವಾಪಸಾಗುತ್ತಿದ್ದರು. ದಾರಿ ಮಧ್ಯೆ ಜನರ ಗುಂಪು ವಾಹನಗಳಿಗೆ ಅಡ್ಡಗಟ್ಟಿ 7 ಮಂದಿ ಪಂಚಾಯತ್ ಸದಸ್ಯರನ್ನು ಬಲವಂತವಾಗಿ ಕರೆದೊಯ್ದಿತೆನ್ನಲಾಗಿದೆ. ಇದರಿಂದ ಕುಪಿತರಾದ ಸ್ಥಳೀಯ ರಾಜಕೀಯ ನಾಯಕರು ಪೊಲೀಸ್ ಠಾಣೆಗೆ ತೆರಳಿ ಪಂಚಾಯತ್ ಸದಸ್ಯರನ್ನು ಅಪಹರಣ ಮಾಡಲಾಗಿದೆ ಎಂದು ದೂರಿದ್ದಾರೆ.
ಕೂಡಲೇ ಗ್ರಾಮಕ್ಕೆ ತೆರಳಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಪಹರಣಕ್ಕೊಳಗಾದರೆನ್ನಲಾದ ಸದಸ್ಯರಿಂದಲೂ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಸದ್ಯಕ್ಕೆ ಪ್ರಕರಣ ಸುಖಾಂತ್ಯವಾಗಿದ್ದರೂ ಇಂತಹಾ ಪ್ರಸಂಗಗಳು ಮರುಕಳಿಸಬಾರದೆಂಬ ಹಿನ್ನೆಲೆಯಲ್ಲಿ ಅವಾಂತರ ಸೃಷ್ಟಿಸಿರುವವರಿಗೆ ಎಚ್ಚರಿಕೆ ನೀಡುವ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.