ಬೆಂಗಳೂರು: ಪಂಚಮಸಾಲಿ ಮೀಸಲಾತಿ ಫೈಟ್ ಇದೀಗ ಹಠಾತ್ ತಿರುವು ಪಡೆದುಕೊಂಡಿದೆ. ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದ್ದರೂ ನಂತರ ಅವರು ಮರೆತಿದ್ದಾರೆ ಎಂಬುದು ಪಂಚಮಸಾಲಿ ಸಮುದಾಯದ ಸ್ವಾಮೀಜಿ, ಕೂಡಲಸಂಗಮದ ಪಂಚಮಸಾಲಿ ಗುರುಪೀಠಾಧ್ಯಕ್ಷ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ಆಕ್ರೋಶ. ಮೀಸಲಾತಿ ಕಲ್ಪಿಸುವುದಾಗಿ ತಾಯಿ ಮೇಲೆ ಆಣೆ ಮಾಡಿರುವ ಸಿಎಂ ಇದೀಗ ಮಾತು ಮರೆತಿದ್ದಾರೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ಮೀಸಲಾತಿಗಾಗಿ ತಮ್ಮ ಹೋರಾಟವನ್ನು ತೀವ್ರಗೊಳಿಸಿರುವ ಪಂಚಮಸಾಲಿ ಸಮುದಾಯದವರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಇಂದು ಸಿಎಂ ವಿರುದ್ದ ಶ್ರೀಗಳ ನೇತೃತ್ವದಲ್ಲಿ ನಡೆದ ಹೊಯ್ ಕೊಳ್ಳುವ ಹೋರಾಟ ನಾಡಿನ ಗಮನಸೆಳೆಯಿತು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಲಿಂಗಾಯತ ಪಂಚಮಸಾಲಿ ಸಮುದಾಯದ ಮೀಸಲಾತಿ ಸತ್ಯಾಗ್ರಹ ಇಂದು 41ನೇ ದಿನವೂ ಮುಂದುವರಿಯಿತು. ವಿವಿಧ ಜಿಲ್ಲೆಗಳ ಪ್ರಮುಖರು ಈ ಸತ್ಯಾಗ್ರಹದಲ್ಲಿ ಭಾಗವಹಿಸಿ ರಾಜ್ಯ ಸರ್ಕಾರದ ವಿರುದ್ದ ರಣಕಹಳೆ ಮೊಳಗಿಸಿತು.
ಇಷ್ಟೂ ದಿನಗಳ ಹೋರಾಟದ ನಡುವೆ, ಮುಂಬರುವ ಚುನಾವಣೆ ಬಹಿಷ್ಕಾರ, ಮತಪತ್ರದಲ್ಲಿ ಉತ್ತರ ನೀಡುವ ಘೋಷಣೆ, ಹೆದ್ದಾರಿ ಬಂದ್ ನಡೆಸುವ ಸಂದೇಶದಂತಹಾ ಎಚ್ಚರಿಕೆ ನೀಡಿದರೂ ಸರ್ಕಾರ ಸ್ಪಂಧಿಸಿಲ್ಲ ಎಂಬುದು ಶ್ರೀಗಳ ಅಸಮಾಧಾನ. ಇದೀಗ ಮಾತು ಮರೆತ ಸಿಎಂ ವಿರುದ್ದ ಹಾಗೂ ಪಂಚಮಸಾಲಿ ಸಮುದಾಯವನ್ನು ನಿರ್ಲಕ್ಷಿಸಿರುವ ಬಿಜೆಪಿ ಸರ್ಕಾರದ ವಿರುದ್ದ ಬೆಂಗಳೂರಲ್ಲಿ ಗುರುವಾರ ಮಧ್ಯಾಹ್ನ ಬಾಯಿ ಬಡಿದುಕೊಳ್ಳುವ (ಹೊಯಿಕೊಳ್ಳುವ) ವಿಶೇಷ ಹೋರಾಟ ನಡೆಸಿದರು.
ತಾಳಿಕೋಟಿ, ಹಾಗೂ ಮುದ್ದೇಬಿಹಾಳದ ಪಂಚಮಸಾಲಿ ಚಳುವಳಿಗಾರರು ಹಾಗೂ ಪದಾಧಿಕಾರಿಗಳು ಈ ಹೋರಾಟದಲ್ಲಿ ಭಾಗಿಯಾಗಿ, ಮುಖ್ಯ ಮಂತ್ರಿಗಳು 6 ಬಾರಿ ತಾಯಿ ಮೇಲೆ ಆಣಿ ಮಾಡಿ ಮೋಸ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಸಿಎಂ ಮಾತು ತಪ್ಪಿದ್ದರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಿಂದ ಶೇಷಾದ್ರಿಪುರ ವೃತ್ತ ಬಳಿ ಮೆರವಣಿಗೆಯಲ್ಲಿ ತೆರಳಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರದ ಮುಂದೆ ಬಾಯಿ ಬಡಿದುಕೊಳ್ಳುವ ಮೂಲಕ ಚಳವಳಿ ಕೈಗೊಂಡರು.