ಬೆಂಗಳೂರು; ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಣಿಸಲು 26 ವಿರೋಧ ಪಕ್ಷಗಳು ಒಗ್ಗೂಡುತ್ತಿವೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಆಯೋಜಿತವಾಗಿರುವ ಪ್ರತಿಪಕ್ಷಗಳ ಸಭೆ ಕುರಿತಂತೆ ಮಾಹಿತಿ ನೀಡಲು ಕಾಂಗ್ರೆಸ್ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಸಿ.ವೇಣುಗೋಪಾಲ್, ದೇಶದಲ್ಲಿ ಪ್ರಜಾಪ್ರಭುತ್ವ ರಕ್ಷಣೆ, ಸಾಂವಿಧಾನಿಕ ಹಕ್ಕುಗಳು ಹಾಗೂ ಸ್ವಾಯತ್ತ ಸಂಸ್ಥೆಗಳ ರಕ್ಷಣೆಯ ಸದುದ್ದೇಶದಿಂದ ವಿರೋಧ ಪಕ್ಷಗಳು ಒಂದಾಗಿವೆ ಎಂದರು.
ಬಿಜೆಪಿ ಸರ್ಕಾರ ವಿರೋಧ ಪಕ್ಷಗಳ ಧ್ವನಿ ಅಡಗಿಸಲು ಸಾಂವಿಧಾನಿಕ ಸಂಸ್ಥೆಗಳಾದ ಇಡಿ, ಸಿಬಿಐ, ಐಟಿ ಸಂಸ್ಥೆಗಳನ್ನು ಅಸ್ತ್ರವಾಗಿ ಬಳಸುತ್ತಿದೆ. ರಾಹುಲ್ ಗಾಂಧಿ ಅವರ ಅನರ್ಹತೆ, ಮಹಾರಾಷ್ಟ್ರದ ಬೆಳವಣಿಗೆ ಇದಕ್ಕೆ ಸಾಕ್ಷಿ. ಮಣಿಪುರ ಕಳೆದ 75 ದಿನಗಳಿಂದ ಹೊತ್ತಿ ಉರಿಯುತ್ತಿದೆ. ಆ ಬಗ್ಗೆ ಒಂದೇ ಒಂದು ಪರಿಹಾರ ಇಲ್ಲ. ಈ ಬಗ್ಗೆ ದೇಶದ ಪ್ರಧಾನಮಂತ್ರಿಗಳು ಒಂದೇ ಒಂದು ಮಾತನಾಡಿಲ್ಲ. ಇದು ಆಘಾತಕಾರಿ ಬೆಳವಣಿಗೆ ಎಂದ ಅವರು, ದೇಶದ ಜನ ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದರು.
ನಾವು ಅಧಿಕಾರ ಪಡೆಯಲು ಸಭೆ ಸೇರುತ್ತಿಲ್ಲ. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಡೆಯುತ್ತಿರುವ ಸಭೆ ಎಂದ ವೇಣುಗೋಪಾಲ್, ಈ ಸರ್ಕಾರ ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿದ್ದು, ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದ್ದು, ಸಮಯ ಬಂದಾಗ ಜನ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಇಂದು 26 ವಿರೋಧ ಪಕ್ಷಗಳು ಒಗ್ಗಟ್ಟಾಗಿ ಕೆಲಸ ಮಾಡಲು ಮುಂದಾಗಿವೆ. ಇದು ವಿರೋಧ ಪಕ್ಷಗಳ ಎರಡನೇ ಸಭೆಯಾಗಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿ ಹೋರಾಟ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.
20ರಿಂದ ಸಂಸತ್ ಅಧಿವೇಶನ ಆರಂಭವಾಗಲಿದ್ದು, ಅಲ್ಲಿ ಯಾವ ರೀತಿ ಹೋರಾಟ ಮಾಡಬೇಕು ಎಂಬ ತಂತ್ರಗಾರಿಕೆ ರೂಪಿಸಲಾಗುವುದು ಎಂದ ಅವರು, ಈ ಸಭೆ ರಾಷ್ಟ್ರ ರಾಜಕಾರಣದಲ್ಲಿ ಗೇಮ್ ಚೆಂಜರ್ ಆಗಲಿದೆ. ಪಾಟ್ನಾ ಸಭೆ ನಂತರ ಎಲ್ಲಾ ವಿರೋಧ ಪಕ್ಷಗಳನ್ನು ಏಕಾಂಗಿಯಾಗಿ ಎದುರಿಸಬಲ್ಲೇವು ಎಂದು ಬೀಗುತ್ತಿದ್ದವರು ಈಗ ಬೇರೆ ಪಕ್ಷಗಳ ಜೊತೆ ಮೈತ್ರಿಗೆ ಮುಂದಾಗಿದ್ದಾರೆ. ಇದು ವಿರೋಧ ಪಕ್ಷಗಳ ಒಗ್ಗಟ್ಟಿನ ಮೊದಲ ಯಶಸ್ಸಾಗಿದೆ ಎಂದರು.