ಬೆಂಗಳೂರು: ನಿರೀಕ್ಷೆಯಂತೆಯೇ ರಾಜ್ಯ ಸರ್ಕಾರ ರಾಜ್ಯವ್ಯಾಪಿ ಲಾಕ್‌ಡೌನ್ ಘೋಷಿಸಿದೆ. 14 ದಿನಗಳು ಈ ಟಫ್ ರೂಲ್ಸ್ ಜಾರಿಯಲ್ಲಿರಲಿದೆ.
ಕೊರೋನಾ ಸೋಂಕು ಉಲ್ಬಣಗೊಳ್ಳುತ್ತಿದ್ದು ಸೋಂಕು ನಿಯಂತ್ರಿಸಲು ಸರ್ಕಾರ ಇಟ್ಟಿರುವ ಹೆಜ್ಜೆ ಫಲಕೊಡುತ್ತಿದೆ ಎಂಬುದು ಅನೇಕರ ಅಭಿಪ್ರಾಯ. ಈ ವರೆಗಿನ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೇ 4 ರವರೆಗೆ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ವಿಸ್ತರಣೆಗೆ ಸರ್ಕಾರ ಚಿಂತನೆ ನಡೆಸಿತ್ತು. ಈ ಬಗ್ಗೆ ಇಂದು ಸಂಪುಟದಲ್ಲಿ ಚರ್ಚಿಸಲಾಯಿತು. ತಜ್ಞರ ಅಭಿಪ್ರಾಯ ಆಧರಿಸಿ ಸೂಕ್ತ ನಿರ್ಧಾರ ಕೈಗೊಳ್ಳುವ ಸಂಬಂಧ ಸಂಪುಟದಲ್ಲಿ ಸುದೀರ್ಘ ಚರ್ಚೆ ನಡೆದಿದೆ. ಸೋಂಕು ತಡೆಯಲು ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಅನಿವಾರ್ಯವಾಗಿದೆ ಎಂದು ಸಚಿವ ಸುಧಾಕರ್ ಮನವರಿಕೆ ಮಾಡಿದರು. ಸುದೀರ್ಘ ಚರ್ಚೆಯ ನಂತರ ಈ ಲಾಕ್‌ಡೌನ್ ಜಾರಿಗೆ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿತು ಎನ್ನಲಾಗಿದೆ. ಈ ಕುರಿತಂತೆ ಸುದ್ದಿಗಾರರಿಗೆ ವಿವರ ನೀಡಿದ ಸಿಎಂ ಯಡಿಯೂರಪ್ಪ, ಲಾಕ್‌ಡೌನ್ ನಿರ್ಧಾರವನ್ನು ಪ್ರಕಟಿಸಿದರು. ಎರಡು ವಾರಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಾರದಿದ್ದಲ್ಲಿ ಮತ್ತೆ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಸರ್ಕಾರಿ ಬಸ್‌ಗಳ ಸಂಚಾರವೂ ಸ್ಥಗಿತಗೊಳ್ಳಲಿದೆ. ಆದರೆ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಿಲ್ಲ.
ಹೊಟೇಲ್‌ಗಳಲ್ಲಿ ಪಾರ್ಸೆಲ್‌ಗಳಿಗೆ ಮಾತ್ರ ಅವಕಾಶ. ಕಟ್ಟಡ ಕಾಮಗಾರಿಗೆ ಅಡಚಣೆಯಿಲ್ಲ. ನಿತ್ಯದ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6ಗಂಟೆಯಿಂದ 10 ಗಂಟೆವರೆಗೆ ಮಾತ್ರ ಅವಕಾಶವಿದೆ.
ಈ ನಡುವೆ ಲಾಕ್‌ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಮಳಿಗೆಗಳು ಹಾಗೂ ಅಗತ್ಯ ಸೇವೆಗಳ ಹೊರತಾಗಿ ಬೇರೆ ವಹಿವಾಟುಗಳಿಗೆ ಅವಕಾಶ ನೀಡದಿರಲು ಸರ್ಕಾರ ಮುಂದಾಗಿದೆ. ಈ ಬಾರಿಯೂ ಕರ್ಫ್ಯೂ ಸಂದರ್ಭದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಗೆ ಪೊಲೀಸರು ಕೂಡಾ ಸರ್ವ ಸನ್ನದ್ದರಾಗಿದ್ದಾರೆ.