ಮಂಡ್ಯ: ಹನುಮ ಧ್ವಜ ತೆರವು ಕಾರ್ಯಾಚರಣೆಯಿಂದಾಗಿ ಮಂಡ್ಯ ಸಮೀಪದ ಕೆರಗೋಡು ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಗ್ರಾಮದಲ್ಲಿ ಹಾರಿಸಲಾಗಿರುವ ಹನುಮ ಧ್ವಜವನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಹೋರಾಟಕ್ಕಿಳಿದಿದ್ದಾರೆ. ಸ್ಥಳಕ್ಕೆ ಭೇಟಿನೀಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ಗ್ರಾಮಸ್ಥರು ಮತ್ತು ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜನವರಿ 22 ರಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗ್ರಾಮದಲ್ಲಿ 108 ಅಡಿ ಧ್ವಜಸ್ಥಂಭದಲ್ಲಿ ಹನುಮಧ್ವಜವನ್ನು ಹಾರಿಸಿದ್ದರು. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಸರ್ಕಾರಿ ಜಾಗದಲ್ಲಿ ಧ್ವಜಸ್ಥಂಭ ನೆಡಲಾಗಿದೆ ಎಂಬ ಕಾರಣ ನೀಡಿ ತಾಲೂಕು ಪಂಚಾಯಿತಿ ಅಧಿಕಾರಿಗಳು ಧ್ವಜಸ್ಥಂಭ ತೆರವು ಮಾಡಲು ಮುಂದಾಗಿದ್ದರು ಎನ್ನಲಾಗಿದೆ.
ಅಧಿಕಾರಿಗಳ ಆಗಮನದ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಹಾಗೂ ಭಜರಂಗದಳ ಕಾರ್ಯಕರ್ತರು ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಾಣ ಬಿಟ್ಟರು ಧ್ವಜ ಇಳಿಸಲ್ಲ ಎಂದು ಸವಾಲು ಹಾಕಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು. ಒಂದು ಹಂತದಲ್ಲಿ ನೂಕಾಟ ತಳ್ಳಾಟ ನಡೆದು ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿ ಪೊಲೀಸರು ಲಾಠಿಗೆ ಕೆಲಸ ಕೊಟ್ಟ ಸನ್ನಿವೇಶವೂ ಸೃಷ್ಟಿಯಾಯಿತು.
ಈ ಘಟನೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





































































