ಬೆಂಗಳೂರು: ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲ್ಲಿಸಿದರೆ ಅದು ಟೋಯಿಂಗ್ ವೆಹಿಕಲ್ ಏರುವುದು ಸಹಜ ಪ್ರಕ್ರಿಯೆ. ಆದರೆ ಈ ಸಂದರ್ಭದಲ್ಲಿ ಟೋಯಿಂಗ್ ಸಿಬ್ಬಂದಿಯ ಅವಾಂತರ ವಿವಾದಕ್ಕೆ ಗ್ರಾಸವಾಗುತ್ತಿತ್ತು. ಈ ಕುರಿತಂತೆ ವ್ಯಾಪಕ ದೂರುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ರವಿಕಾಂತೇಗೌಡರು ಸರಳ ಸೂತ್ರವೊಂದನ್ನು ಮುಂದಿಟ್ಟಿದ್ದಾರೆ.
ಜನಸ್ನೇಹೀ ಕ್ರಮ, ಸರಳ ಕಾರ್ಯಾಚರಣೆ ಸಂಬಂಧ ತಮ್ಮ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿರುವ ಅವರು, ಸಾರ್ವಜನಿಕರಿಗೆ ಕಿರುಕುಳವಾಗದಂತೆ ಕ್ರಮ ಅನುಸರಿಸುವಂತೆ ನಿರ್ದೇಶಿಸಿದ್ದಾರೆ.
ಟೋಯಿಂಗ್ ಮಾಡುವಾಗ ಸಂಚಾರ ಪೊಲೀಸರು ಮೊಬೈಲ್‌ನಲ್ಲಿ ಫೊಟೋ ಸೆರೆ ಹಿಡಿದುಕೊಳ್ಳಬೇಕು. ಒಬ್ಬ ಎಎಸ್‌ಐ ಸಮವಸ್ತ್ರದಲ್ಲಿ ಟೋಯಿಂಗ್ ವಾಹನದಲ್ಲಿರಬೇಕು. ಟೋಯಿಂಗ್ ಸಿಬ್ಬಂದಿ ಕೂಡ ಸಮವಸ್ತ್ರ ಧರಿಸಬೇಕು. ಟೋಯಿಂಗ್‌ಗೆ ಮೊದಲು ಧ್ವನಿವರ್ಧಕದ ಮೂಲಕ ಸೂಚಿಸಬೇಕು. ನಂತರವೂ ವಾಹನ ಮಾಲೀಕರ ಬರದಿದ್ದಾಗ, ವಾಹನದ ನಾಲ್ಕು ಕಡೆಯಿಂದ ಪೋಟೋ ತೆಗೆದುಕೊಂಡು ಟೋಯಿಂಗ್ ಮಾಡಬೇಕು.
ಟೋಯಿಂಗ್ ಮಾಡುವಾಗ ವಾಹನ ಮಾಲೀಕ ಬಂದರೆ, ನೋಪಾರ್ಕಿಂಗ್ ದಂಡ ಮಾತ್ರ ಕಟ್ಟಿಸಿಕೊಳ್ಳಬೇಕು. ಟೋಯಿಂಗ್ ಮಾಡಿದರೆ ಟೋಯಿಂಗ್, ನೋಪಾರ್ಕಿಂಗ್ ದಂಡ ಎರಡನ್ನೂ ಕಟ್ಟಿಸಿಕೊಳ್ಳಬೇಕು. ಟೋಯಿಂಗ್ ಯಾರ್ಡ್‌ನಲ್ಲಿ ಒಬ್ಬ ಸಿಬ್ಬಂದಿ ಇರಲಿದ್ದಾರೆ.
ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡಿರುವ ರವಿಕಾಂತೇಗೌಡರು, ಟೋಯಿಂಗ್ ನಿಯಮ ಪಾಲಿಸದ ಐದು ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ. ಟೋಯಿಂಗ್ ಸಂದರ್ಭದಲ್ಲಿ ಲೈವ್ ಸ್ಟ್ರೀಮಿಂಗ್ ಮಾಡದ ಟೋಯಿಂಗ್‌ನ 45 ಮಂದಿಯನ್ನು ಅಮಾನತು ಮಾಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ.