ಬೆಂಗಳೂರು: ರಾಜ್ಯದ ವಿವಿಧ ಆಗಮ ವಿಭಾಗಗಳಲ್ಲಿ ಐದು ವರ್ಷಗಳ ವಿದ್ಯಾಭ್ಯಾಸ ಮತ್ತು ಪರೀಕ್ಷೆಗಳಲ್ಲಿ ತೇರ್ಗಡೆಯಾದ ಸುಮಾರು 2,103 ಅರ್ಚಕರಿಗೆ ಪ್ರಮಾಣಪತ್ರ (ಘಟಿಕೋತ್ಸವ ಸರ್ಟಿಫಿಕೇಟ್) ವಿತರಿಸಲು ಮುಜರಾಯಿ ಇಲಾಖೆ ಕ್ರಮ ಕೈಗೊಂಡಿದೆ.
ಈ ಕಾರ್ಯಕ್ರಮ ಜುಲೈ 19ರಂದು ಮದ್ಯಾಹ್ನ 3 ಗಂಟೆಗೆ ಬಸವನಗುಡಿಯ ಶ್ರೀ ಶೃಂಗೇರಿ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. 2006ರಿಂದ ಇಲ್ಲಿಯವರೆಗೆ ವಿದ್ಯಾಭ್ಯಾಸ ಮುಗಿಸಿ ಆಗಮ ಪ್ರವೀಣ ಪರೀಕ್ಷೆ ತೇರ್ಗಡೆಯಾದವರಿಗೆ ಈವರೆಗೂ ಘಟಿಕೋತ್ಸವ ಪ್ರಮಾಣಪತ್ರ ನೀಡಲಾಗಿಲ್ಲ. ಈ ನಿಟ್ಟಿನಲ್ಲಿ, ಪ್ರಮುಖ ತೀರ್ಮಾನ ಕೈಗೊಂಡು ಸಮಾರಂಭ ಆಯೋಜಿಸಲಾಗಿದೆ.
ಏಳು ಆಗಮ ವಿಭಾಗಗಳ ಶಿಕ್ಷಣ
ಈ ಅರ್ಚಕರು ಶೈವಾಗಮ, ವೈಖಾನಸಾಗಮ, ಪಂಚರಾತ್ರಾಗಮ, ತಂತ್ರಸಾರಾಗಮ, ವಾತುಲಾಗಮ, ವೀರಶೈವ ಆಗಮ ಹಾಗೂ ಜೈನಾಗಮ ಇತ್ಯಾದಿ ಏಳು ವಿಭಾಗಗಳಲ್ಲಿ ಮೂರು ವರ್ಷ ಪ್ರವರ ಹಾಗೂ ಎರಡು ವರ್ಷ ಪ್ರವೀಣ ತರಬೇತಿ ಪಡೆದಿದ್ದಾರೆ. ಕರ್ನಾಟಕ ರಾಜ್ಯ ಆಗಮ ಶಿಕ್ಷಣ ಮತ್ತು ಪರೀಕ್ಷಾ ಸಮಿತಿಯಿಂದ ಮಾನ್ಯತೆ ಪಡೆದ ಕೋರ್ಸ್‌ಗಳಲ್ಲಿ ಅವರು ತೇರ್ಗಡೆಯಾಗಿದ್ದಾರೆ.
ಚರಿತ್ರಾತ್ಮಕ ತೀರ್ಮಾನಈ ಹಿಂದೆ ಮೈಸೂರಿನಲ್ಲಿ 800 ಅರ್ಚಕರಿಗೆ ಸಾಂಕೇತಿಕವಾಗಿ ಪ್ರಮಾಣಪತ್ರ ವಿತರಣೆ ಮಾಡಿದ್ದ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಈಗ ರಾಜ್ಯದಾದ್ಯಂತ ಬಾಕಿಯಿರುವ ಅರ್ಚಕರಿಗೆ ಘೋಷಿತವಾಗಿ ಪ್ರಮಾಣಪತ್ರ ನೀಡಲು ಕ್ರಮ ಕೈಗೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮೀಜಿ, ಪೇಜಾವರ ಮಠದ ಪ್ರಸನ್ನ ತೀರ್ಥರು, ವಿಶ್ವ ಒಕ್ಕಲಿಗರ ಮಠದ, ಡಾ. ನಿಶ್ಚಲಾನಂದನಾಥ ಮಹಾಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಕೇಂದ್ರ ಸಚಿವರಾದ ನಿರ್ಮಲ ಸೀತಾರಾಮ್ ಹಾಗೂ ಶೋಭಾ ಕರಂದ್ಲಾಜೆ ಭಾಗವಹಿಸಲಿದ್ದಾರೆ. ಶಾಸಕರಾದ ಉದಯ್ ಗರುಡಾಚಾರ್ ಸೇರಿದಂತೆ, ಶಾಸಕರು, ಸಚಿವರು, ಸಂಸದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮುಜರಾಯಿ ಸಚಿವರ ಕಚೇರಿ ಮೂಲಗಳು ತಿಳಿಸಿವೆ.





















































