ಮಂಗಳೂರು: ಎಲ್ಲೆಲ್ಲೂ ನವರಾತ್ರಿ ವೈಭವದ ಅಂತ್ಯದಲ್ಲಿ ಧಾರ್ಮಿಕ ಕೈಂಕರ್ಯಗಳು ನೆರವೇರಿದರೆ ಬಂದರು ನಗರಿ ಮಂಗಳೂರು ಧರ್ಮ ರಕ್ಷಣೆಯ ಸಂಕಲ್ಪಕ್ಕೆ ಸಾಕ್ಷಿಯಾಯಿತು. ಸಂಘದ ವಿವಿಧ ಕ್ಷೇತ್ರಗಳ ಪ್ರಮುಖರ ಉಪಸ್ಥಿತಿಯಲ್ಲಿ ‘ತ್ರಿಶೂಲ ದೀಕ್ಷೆ’ ಸಮಾರಂಭ ಗಮನಸೆಳೆಯಿತು. ತ್ರಿಶೂಲ ದೀಕ್ಷೆ ಹೆಸರಲ್ಲಿ ಹಿಂದೂ ಕಾರ್ಯಕರ್ತರಿಗೆ ಭಜರಂಗ ದಳದ ವತಿಯಿಂದ ಸಾಂಕೇತಿಕ ಶಸ್ತ್ರ ಹಂಚಲಾಯಿತು.
ಮಂಗಳೂರಿನಲ್ಲಿ ತ್ರಿಶೂಲ ದೀಕ್ಷೆ ಕಾರ್ಯಕ್ರಮ ಕುರಿತಂತೆ ಭಾರೀ ಚರ್ಚೆ ಏರ್ಪಟ್ಟಿತ್ತು. ತ್ರಿಶೂಲದಂಥ ಶಸ್ತ್ರವನ್ನು ಕಾರ್ಯಕರ್ತರಿಗೆ ಹಂಚುವ ಬಜರಂಗದಳದ ಈ ಕಾರ್ಯಕ್ರಮಕ್ಕೆ ರಾಜಕೀಯ ಎದುರಾಳಿಗಳಿಂದ ಆಕ್ಷೇಪವೂ ವ್ಯಕ್ತವಾಗಿತ್ತು. ಆದರೆ ಇದು ಆಯುಧ ಪೂಜೆಯ ಒಂದು ಭಾಗವಾಗಿ ತ್ರಿಶೂಲ ದೀಕ್ಷೆ ಕಾರ್ಯಕ್ರಮ ಎಂದು ಭಜರಂಗದಳ-ವಿಶ್ವ ಹಿಂದೂ ಪರಿಷತ್ ಪ್ರಮುಖರು ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನ ಕದ್ರಿಯ ವಿಶ್ವಹಿಂದೂಪರಿಷತ್ ಕಚೇರಿಯಲ್ಲಿ ನಡೆದ ‘ತ್ರಿಶೂಲ ದೀಕ್ಷೆ’ ಕಾರ್ಯಕ್ರಮದಲ್ಲಿ ಭಾರೀ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು. ವಿಶ್ವಹಿಂದೂ ಪರಿಷತ್ತಿನ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನೆರವೇರಿತು.
ಕಾರ್ಯಕರ್ತರ ಕೈಗೆ ಬಹಿರಂಗವಾಗಿ ಶಸ್ತ್ರ ಕೊಟ್ಟು ಬಜರಂಗದಳ ವಿವಾದಾತ್ಮಕ ಹೆಜ್ಜೆ ಇಟ್ಟಿದೆ ಎಂದು ಅನೇಕರು ಈ ಕಾರ್ಯಕ್ರಮವನ್ನು ಬಣ್ಣಿಸಿದ್ದಾರೆ. ಆದರೆ ಟೀಕೆಗಳಿಗೆ ಕಿವಿಗೊಡದ ಹಿಂದೂ ಸಂಘಟನೆಗಳ ಪ್ರಮುಖರು, ಇ ತ್ರಿಶೂಲ ದೀಕ್ಷೆಯ ಹಿಂದೆ ಯಾವುದೇ ಪಿತೂರಿ ಇಲ್ಲ, ಇದೊಂದು ಧಾರ್ಮಿಕ ಕಾರ್ಯಕ್ರಮವಾಗಿರುತ್ತದೆ ಎಂದು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರು. ಅದರಂತೆ ದೇಶಭಕ್ತಿ ಗೀತೆ, ಧರ್ಮ ಜಾಗರಣದ ಉಪದೇಶಗಳ ಜೊತೆಯಲ್ಲಿ ತ್ರಿಶೂಲ ದೀಕ್ಷೆಯ ಕಾರ್ಯಕ್ರಮ ಯಾವುದೇ ಅಹಿತಕರ ಸನ್ನಿವೇಶಕ್ಕೆ ಅವಕಾಶ ನೀಡದೆ ನೆರವೇರಿದೆ.
ಪೊಲೀಸ್ ಆಯುಕ್ತರ ಪ್ರತಿಕ್ರಿಯೆ..
ಮಂಗಳೂರಿನಲ್ಲಿ ಬಜರಂಗದಳದ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ವಿತರಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ಪೊಲೀಸ್ ಅಯುಕ್ತ ಶಶಿಕುಮಾರ್, ಮಂಗಳೂರು ನಗರ ಸೇರಿ ಅಕ್ಕಪಕ್ಕದ ಜಿಲ್ಲೆಗಳಲ್ಲಿ ತ್ರಿಶೂಲ ದೀಕ್ಷೆ ಕೊಟ್ಟಿದ್ದಾರೆ. ಪರಿಶೀಲನೆ ಮಾಡಿದಾಗ ಪ್ರತೀ ವರ್ಷ ಸಾಂಕೇತಿಕವಾಗಿ ಮಾಡ್ತಾರೆ ಅಂತ ಗೊತ್ತಾಗಿದೆ. ಈ ಬಗ್ಗೆ ನಮ್ಮ ಅಧಿಕಾರಿಗಳಿಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಸೂಚಿಸಿರುವುದಾಗಿ ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಈ ಕಾರ್ಯಕ್ರಮ ಬಗ್ಗೆ ಆಕ್ಷೇಪ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾನೂನು ಉಲ್ಲಂಘನೆಯಾಗಿದೆಯೇ ಎಂದು ಪರಿಶೀಲಿಸಲಾಗುವುದು ಎಂದರು.