(ವರದಿ: ಸುರೇಶ್ ಬಾಬು ದೊಡ್ಡಬಳ್ಳಾಪುರ)
ಬೆಂಗಳೂರು: ವೇಗವಾಗಿ ಬೆಳೆಯುತ್ತಿರುವ ಸಿಲಿಕಾನ್ ಸಿಟಿ ಇದೀಗ ಐಟಿ-ಬಿಟಿ ಮಾತ್ರವಲ್ಲ, ಬಹುತೇಕ ಎಲ್ಲಾ ವಾಣಿಜ್ಯೋದ್ಯಮಗಳ ಹಬ್. ಹಾಗಾಗಿ ಸಿಲಿಕಾನ್ ಸಿಟಿಯನ್ನು ನವದೆಹಲಿ ಮಾದರಿಯಲ್ಲೇ ‘ನವ ಬೆಂಗಳೂರು’ ಎಂದು ಘೋಷಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ದೊಡ್ಡಬಳ್ಳಾಪುರ ಹೊಸಹಳ್ಳಿಯಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ‘ನವ ಬೆಂಗಳೂರು’ ಎಂದು ಘೋಷಿಸಿ ಅಭಿವೃದ್ಧಿ ಪಡಿಸುವಂತೆ ನವ ಬೆಂಗಳೂರು ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಹೋರಾಟದ ಸಮಿತಿಯ ಸಾರಥಿ ಸತ್ಯ ಪ್ರಕಾಶ್, ಜಿ.ಎನ್ ಪ್ರದೀಪ್, ಗ್ರಾಮಾಂತರ ಪ್ರದೇಶ ಬೆಂಗಳೂರು ನಗರಕ್ಕೆ ಪರ್ಯಾಯವಾಗಿ ಅಭಿವೃದ್ಧಿ ಪಡಿಸಲು ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಕೈಗಾರಿಕಾ, ಜನಸಂಖ್ಯೆ, ಮೂಲಭೂತ ಸೌಕರ್ಯಗಳು, ಭೌಗೋಳಿಕ ಪ್ರದೇಶ ಎಲ್ಲವೂ ಸಮತೋಲನವಾಗಿದೆ. ಮುಖ್ಯವಾಗಿ ಬೆಂಗಳೂರಿಗೆ ಸಮೀಪದಲ್ಲೇ ಇದ್ದರೂ ಈವರೆಗೆ ಗ್ರಾಮಾಂತರ ಪ್ರದೇಶ ಅಭಿವೃದ್ಧಿಯಾಗಿಲ್ಲ. ಹೀಗಾಗಿ ನಮ್ಮ ಜಿಲ್ಲೆಯನ್ನು ನವ ಬೆಂಗಳೂರು ಎಂದು ಘೋಷಣೆ ಮಾಡಿ ಅಭಿವೃದ್ಧಿ ಪಡಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ರೂಪಿಸಲಾಗುವುದು ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಜಿಲ್ಲಾ ಕೇಂದ್ರವನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದೆ. ಜಿಲ್ಲಾ ಕೇಂದ್ರ ಸ್ಥಾನಮಾನಕ್ಕಾಗಿ ನಾಲ್ಕು ತಾಲ್ಲೂಕಿನ ಶಾಸಕರು ಮನವಿ ಮಾಡಿದ್ದಾರೆ. ಇದರ ಜೊತೆಗೆ ‘ನವ ಬೆಂಗಳೂರು’ ಯೋಜನೆ ಬಗ್ಗೆಯೂ ಎಲ್ಲರೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.