ಬೆಂಗಳೂರು: ಭಯೋತ್ಪಾದನೆ, ಕ್ರಿಮಿನಲ್ ಚಟುವಟಿಕೆ ಮತ್ತು ಗೂಂಡಾ ರಾಜಕೀಯದಂಥ ವಿಚಾರಗಳಲ್ಲಿ ಬಿಜೆಪಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದಿರುವ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ದೇಶವಿರೋಧಿ ಚಟುವಟಿಕೆಯನ್ನು ನಮ್ಮ ಪಕ್ಷ ಸಹಿಸುವುದಿಲ್ಲ ಹಾಗೂ ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಬಿಜೆಪಿ ನಾಯಕರು ರೌಡಿ ಶೀಟರ್ ಜೊತೆ ಉಪಸ್ಥಿತರಿದ್ದ ಬೆಳವಣಿಗೆ ಕುರಿತಂತೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯಿಸಿರುವ ನಳಿನ್ ಕುಮಾರ್ ಕಟೀಲ್, ಆ ಕಾರ್ಯಕ್ರಮದಲ್ಲಿ ನಮ್ಮವರು ಪಾಲ್ಗೊಂಡಿದ್ದನ್ನು ಗಮನಿಸಿದ್ದು, ಆ ಬಗ್ಗೆ ವಿವರಣೆ ಕೇಳಿರುವುದಾಗಿ ತಿಳಿಸಿದರು. ಯಾವುದೇ ಕಾರಣಕ್ಕೂ ಕ್ರಿಮಿನಲ್ ಹಿನ್ನೆಲೆಯುಳ್ಳವರನ್ನು ಬಿಜೆಪಿಗೆ ಸೇರಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಭಯೋತ್ಪಾದನಾ ಚಟುವಟಿಕೆ, ಕ್ರಿಮಿನಲ್ ಮತ್ತು ಗೂಂಡಾ ರಾಜಕೀಯವನ್ನು ಬಿಜೆಪಿ ಸಹಿಸುವುದಿಲ್ಲ.
ಡಿ. ಕೆ. ಶಿವಕುಮಾರ್ ಅವರ ಇತಿಹಾಸ ಬೆಂಗಳೂರಿನ ಜನತೆಗೆ ಗೊತ್ತಿದೆ.
– ಶ್ರೀ @nalinkateel, ರಾಜ್ಯಾಧ್ಯಕ್ಷರು.#NalinSpeaks pic.twitter.com/vaJbbTOY69
— BJP Karnataka (@BJP4Karnataka) December 2, 2022
ಇದೇ ವೇಳೆ ಎಲ್ಲಾ ಕೇಸುಗಳನ್ನೂ ಒಂದೇ ರೀತಿಯಲ್ಲಿ ಪರಿಗಣಿಸಲಾಗದು. ಹಿಂದುತ್ವದ ಪರವಾದ ಹೋರಾಟ ಮಾಡಿದ್ದಕ್ಕಾಗಿ ಹಾಗೂ ವಿವಿಧ ಸಂಘಟನೆಗಳ ಪರವಾಗಿ ಕೆಲಸ ಮಾಡಿದ ಸಂದರ್ಭದಲ್ಲಿ ಹಾಕಲಾದ ಕೇಸುಗಳಿಗೂ ಬೇರೆ ಪ್ರಕರಣಗಳಿಗೂ ವ್ಯತ್ಯಾಸ ಇದೆ. ಅಂತಹಾ ಪ್ರಕರಣಗಳನ್ನು ರೌಡಿ ಚಟುವಟಿಕೆಗಳಿಗೆ ಹೋಲಿಸಿದರೆ ಜನರೇ ಉತ್ತರ ಕೊಡುತ್ತಾರೆ ಎಂದು ನಳಿನ್ ಕುಮಾರ್ ಕಟೀಲ್ ಅವರು ಎದುರಾಳಿ ಪಕ್ಷಗಳಿಗೆ ಎಚ್ಚರಿಕೆ ಕೊಟ್ಟರು.


















































