ಬೆಂಗಳೂರು: ಆಷಾಢ ನಂತರದ ಮೊದಲ ಹಬ್ಬ ‘ನಾಗರ ಪಂಚಮಿ’ಯನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ನಾಡಿನ ದೇವಾಲಯಗಳಲ್ಲಿ ಎಂದಿನಂತೆ ಆಚರಣಾ ವೈಭವ ಕಂಡುಬಂದಿಲ್ಲ. ಕೊರೋನಾ ವೈರಾಣು ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ದೇವಾಲಯಗಳ ಅರ್ಚಕರಷ್ಟೇ ಪೂಜಾ ಸಾಂಪ್ರದಾಯಿಕ ವಿಧಾನಗಳನ್ನು ನೆರವೇರಿಸಿದ್ದಾರೆ.
ದಕ್ಷಿಣ ಭಾರತದ ಪ್ರಮುಖ ನಾಗ ದೇವತಾ ಕ್ಷೇತ್ರ ಎನ್ನಲಾದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಇಂದು ಯಾವುದೇ ಜಾತ್ರಾ ವೈಭವ ಇರಲಿಲ್ಲ. ಅರ್ಚಕ ವೃಂದ ಸಂಪ್ರಾದಾಯಿಕ ಕೈಂಕರ್ಯವನ್ನಷ್ಟೇ ನೆರವೇರಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ನಂತರ ನಾಗರ ಪಂಚಮಿ ವೈಭವಕ್ಕೆ ಸಾಕ್ಷಿಯಾಗುತ್ತಿದ್ದ ಮಂಜೇಶ್ವರದ ಶ್ರೀಮದ್ ಅನಂತೇಶ್ವರ ದೇವಸ್ಥಾನದಲ್ಲೂ ನಾಗರ ಪಂಚಮಿ ಅಂಗವಾಗಿ ಸರಳ ರೀತಿಯಲ್ಲಿ ಆಚರಣೆ ನೆರವೇರಿತು.
ಹದಿನೆಂಟು ಪೇಟೆಯ ದೇವಳವೆಂಬ ಖ್ಯಾತಿಯ ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನದಲ್ಲಿ ನಾಗರಪಂಚಮಿ ಪ್ರಯುಕ್ತ ನಾಗ ದೇವರ ಬಿಂಬಗಳಿಗೆ ಪಂಚಾಮೃತ, ಕ್ಷೀರಾಭಿಷೇಕಗಳು ದೇವಳದ ವೈದಿಕರಿಂದ ನೆರವೇರಿತು.
ಮನೆ ಮನೆಗಳಲ್ಲಿ ಕುಟುಂಬ ಸದಸ್ಯರಿಗಷ್ಟೇ ಈ ಬಾರಿಯ ನಾರ ಪಂಚಮಿ ಆಚರಣೆ ಸೀಮಿತವಾಗಿತ್ತು.